ಉಳ್ಳಾಲ ಸೇತುವೆಯಿಂದ ನದಿಗೆ ತ್ಯಾಜ್ಯ ಎಸೆದ ಪ್ರಕರಣ : ಕಾರು ವಶ
ಮೂವರ ವಿರುದ್ಧ ದೂರು ದಾಖಲು

ಮಂಗಳೂರು, ಮೇ 1: ರಾ.ಹೆ.66ರ ಉಳ್ಳಾಲ ಸೇತುವೆಯಲ್ಲಿ ಶನಿವಾರ ಕಾರು ನಿಲ್ಲಿಸಿ ನದಿಗೆ ತ್ಯಾಜ್ಯ ಎಸೆಯುತ್ತಿದ್ದ ಮೂವರ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಕೆ.ಎ. 03 ಎನ್‌ಬಿ 4648 ಸಂಖ್ಯೆಯ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶನಿವಾರ ಬೆಳಗ್ಗೆ ಇಬ್ಬರು ಮಹಿಳೆಯರು ಕೋಡಿಕಲ್‌ನಲ್ಲಿರುವ ತನ್ನ ಮನೆಯಿಂದ ಕೆಲಸದಾಕೆಯನ್ನು ತೊಕ್ಕೊಟ್ಟಿನಲ್ಲಿ ಬಿಟ್ಟು ಮರಳಿ ಕಾರಿನಲ್ಲಿ ಬರುತ್ತಿದ್ದಾಗ ಕಸದ ಪ್ಲಾಸ್ಟಿಕ್ ಬ್ಯಾಗನ್ನು ನದಿಗೆ ಎಸೆದು ಹೋಗಿದ್ದರು. ಅಂದರೆ ನೇತ್ರಾವತಿ ಸೇತುವೆಯಲ್ಲಿ ಕಾರು ನಿಲ್ಲಿಸಿ ತ್ಯಾಜ್ಯದ ಪ್ಲಾಸ್ಟಿಕ್ ಬ್ಯಾಗನ್ನು ನದಿಗೆ ಎಸೆಯುತ್ತಿದ್ದರು. ಅದನ್ನು ಹಿಂಬದಿಯಲ್ಲಿದ್ದ ಇನ್ನೊಂದು ಕಾರಿನವರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಅದು ಮಾಧ್ಯಮ ಮತ್ತು ಪೊಲೀಸ್ ಅಧಿಕಾರಿಗಳ ಗಮನ ಸೆಳೆಯಿತು.
ಕಾರಿನ ನಂಬರ್ ಸ್ಪಷ್ಟವಾಗಿ ಗೋಚರಿಸುತ್ತಿದ್ದ ಕಾರಣ ಪೊಲೀಸ್ ಆಯುಕ್ತ ಶಶಿಕುಮಾರ್‌ರ ನಿರ್ದೇಶನದ ಮೇರೆಗೆ ಕಂಕನಾಡಿ ನಗರ ಠಾಣೆಯ ಪೊಲೀಸರು ಕೆಲವೇ ಗಂಟೆಯೊಳಗೆ ಕಾರನ್ನು ವಶಪಡಿಸಿಕೊಂಡರು. ಅಲ್ಲದೆ ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಆರೋಗ್ಯ ನಿರೀಕ್ಷಕರ ದೂರಿನ ಮೇರೆಗೆ ಶೈಲಜಾ ನಾಯಕ್, ರಚನಾ ನಾಯಕ್, ಸುಶೀಲಾ ಎಂಬವರ ವಿರುದ್ಧ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





