ಸುರೇಶ್ ರೈನಾ ಐಪಿಎಲ್ ನಲ್ಲಿ ಈ ಮೈಲುಗಲ್ಲು ತಲುಪಿದ ನಾಲ್ಕನೇ ಬ್ಯಾಟ್ಸ್ ಮನ್

ಹೊಸದಿಲ್ಲಿ: ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್ ಮನ್ ಸುರೇಶ್ ರೈನಾ ಶುಕ್ರವಾರ ಮುಂಬೈ ಇಂಡಿಯನ್ಸ್ ವಿರುದ್ಧ ಬ್ಯಾಟಿಂಗ್ ಗೆ ಇಳಿದ ತಕ್ಷಣ ಪ್ರಮುಖ ಮೈಲುಗಲ್ಲು ತಲುಪಿದ ನಾಲ್ಕನೇ ಬ್ಯಾಟ್ಸ್ ಮನ್ ಎನಿಸಿಕೊಂಡರು.
2008ರಲ್ಲಿ ಚೆನ್ನೈ ತಂಡದಲ್ಲಿ ತನ್ನ ಐಪಿಎಲ್ ವೃತ್ತಿಜೀವನ ಆರಂಭಿಸಿದ್ದ ರೈನಾ ಇದೀಗ 200 ಪಂದ್ಯಗಳನ್ನು ಆಡಿದ ಸಾಧನೆ ಮಾಡಿದ್ದಾರೆ.
ಸುರೇಶ್ ರೈನಾ ಅವರು ಚೆನ್ನೈ ನಾಯಕ ಎಂ.ಎಸ್. ಧೋನಿ, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಬಳಿಕ 200 ಹಾಗೂ ಅದಕ್ಕಿಂತ ಹೆಚ್ಚು ಐಪಿಎಲ್ ಪಂದ್ಯಗಳನ್ನಾಡಿದ ನಾಲ್ಕನೇ ಆಟಗಾರ ಎನಿಸಿಕೊಂಡರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿಅವರು ಮುಂದಿನ ವಾರ ಸನ್‍ರೈಸರ್ಸ್ ವಿರುದ್ದ ತನ್ನ ತಂಡವನ್ನುನಾಯಕನಾಗಿ ಮುನ್ನಡೆಸುವ ಮೂಲಕ ರೈನಾ ಇರುವ 200 ಪಂದ್ಯವನ್ನಾಡಿದ ಆಟಗಾರರ ಪಟ್ಟಿಯನ್ನು ಸೇರಲಿದ್ದಾರೆ.
2008ರಿಂದ 2019ರ ತನಕ ಚೆನ್ನೈ ತಂಡದ ಉಪ ನಾಯಕನಾಗಿದ್ದ ರೈನಾ ಮೊದಲ 8 ಆವೃತ್ತಿಗಳಲ್ಲಿ ಒಂದೂ ಪಂದ್ಯವನ್ನು ತಪ್ಪಿಸಿಕೊಂಡಿರಲಿಲ್ಲ. 2020ರಲ್ಲಿ ಯುಎಇನಲ್ಲಿ ನಡೆದಿದ್ದ ಐಪಿಎಲ್ ಟೂರ್ನಿಯಿಂದ ವೈಯಕ್ತಿಕ ಕಾರಣದಿಂದ ಹೊರಗುಳಿದಿದ್ದರು.