ದ.ಕ. ಜಿಲ್ಲೆ : ಕೋವಿಡ್ ಗೆ ಇಬ್ಬರು ಬಲಿ; 933 ಮಂದಿಗೆ ಕೊರೋನ ಸೋಂಕು

ಮಂಗಳೂರು, ಮೇ 1: ದ.ಕ.ಜಿಲ್ಲೆಯಲ್ಲಿ ಕೊರೋನ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಶನಿವಾರ 933 ಮಂದಿಗೆ ಕೊರೋನ ಪಾಸಿಟಿವ್ ಆಗಿದೆ. ಅಲ್ಲದೆ ಇಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತಪಟ್ಟವರ ಸಂಖ್ಯೆ 759ಕ್ಕೇರಿದೆ.
ಜಿಲ್ಲೆಯಲ್ಲಿ ಕೊರೋನ ಸೋಂಕಿನಿಂದ ಗುಣಮುಖರಾದ 404 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 46,042 ಮಂದಿ ಕೊರೋನ ಸೋಂಕಿಗೊಳಗಾಗಿದ್ದು, ಈ ಪೈಕಿ 38,270 ಮಂದಿ ಗುಣಮುಖರಾಗಿದ್ದಾರೆ. ಸದ್ಯ 7,013 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈವರೆಗೆ ಜಿಲ್ಲೆಯ 7,45,094 ಮಂದಿಯ ಪರೀಕ್ಷೆ ಮಾಡಲಾಗಿದ್ದು, 6,99,052 ಮಂದಿಯ ವರದಿ ನೆಗೆಟಿವ್ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್-19 ಮಾರ್ಗಸೂಚಿ ಉಲ್ಲಂಘಿಸಿದ ಆರೋಪದಡಿ 50,377 ಪ್ರಕರಣ ದಾಖಲಿಸಲಾಗಿದೆ. 52,69,130 ರೂ. ದಂಡ ವಸೂಲಿ ಮಾಡಲಾಗಿದೆ.
ದ.ಕ.ಜಿಲ್ಲಾ ವ್ಯಾಪ್ತಿಯಲ್ಲಿ ಶನಿವಾರ ಕೋವಿಡ್ -19 ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕೆ 9 ಪ್ರಕರಣ ದಾಖಲಾಗಿದೆ. ಮಾಸ್ಕ್ ಧರಿಸದ 310 ಪ್ರಕರಣ ದಾಖಲಿಸಿ, 53 ವಾಹನಗಳನ್ನು ವಶಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.







