ಗ್ರಾಮಗಳಲ್ಲಿ ಕೋವಿಡ್ ಹರಡದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ: ಉಡುಪಿಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ
'ಮೂರು ಗ್ರಾಪಂಗೊಬ್ಬ ನೋಡೆಲ್ ಅಧಿಕಾರಿ ನೇಮಕ'

ಉಡುಪಿ, ಮೇ 1: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹರಡದಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳೂಬೇಕು. ಇದಕ್ಕಾಗಿ ಪ್ರತಿ ಮೂರು ಗ್ರಾಪಂಗಳಿಗೆ ಒಬ್ಬ ನೋಡೆಲ್ ಅಧಿಕಾರಿಯನ್ನು ನೇಮಕ ಮಾಡಬೇಕು ಹಾಗೂ ಆಸ್ಪತ್ರೆಗಳಲ್ಲಿ ಬೆಡ್ ಮ್ಯಾನೇಜ್‌ಮೆಂಟ್ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ, ರಾಜ್ಯ ಗೃಹ, ಕಾನೂನು, ಸಂಸದೀಯ ವ್ಯವಹಾರಗಳ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶನಿವಾರ ಸಂಜೆ ಉಡುಪಿಗೆ ಆಗಮಿಸಿದ ಸಚಿವರು, ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣದ ಕುರಿತಂತೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತಿದ್ದರು.
ಇಂದಿನ ಸಭೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸ್ಥಿತಿಗತಿಯ ಕುರಿತಂತೆ ವಿಶ್ಲೇಷಣೆ ನಡೆಸಿದ್ದೇವೆ. ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ಗಳೊಂದಿಗೆ ಚರ್ಚಿಸಿದ್ದೇವೆ ಎಂದರು.
ಜಿಲ್ಲೆಯಲ್ಲಿ ಸದ್ಯ 44 ಐಸಿಯು, 25 ವೆಂಟಿಲೇಟರ್‌ಗಳಲ್ಲಿ ಚಿಕಿತ್ಸೆ ನಡೆಯುತ್ತಿದೆ. 171 ಐಸಿಯು ಬೆಡ್, 79 ವೆಂಟಿಲೇಟರ್‌ಗಳು ಚಿಕಿತ್ಸೆಗೆ ಲಭ್ಯವಿದೆ. ಜಿಲ್ಲೆಯಲ್ಲಿ 2600ಕ್ಕೂ ಅಧಿಕ ಸಕ್ರೀಯ ಪ್ರಕರಣಗಳಿವೆ. ಆದರೆ ಹೋಮ್ ಐಸೋಲೇಶನ್ ಬಗ್ಗೆ ಹೆಚ್ಚಿನ ಗಮನ ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವರು ನುಡಿದರು.
ಮಣಿಪಾಲದ ಕೆಎಂಸಿಯಲ್ಲಿ 60 ಐಸಿಯು ಬೆಡ್ ನಿಗದಿ ಪಡಿಸಲು ಸೂಚನೆ ನೀಡಲಾಗಿದೆ. ಅವಶ್ಯಕತೆ ಬಿದ್ದಲ್ಲಿ ನಗರದ ಡಾ.ಟಿಎಂಎ ಪೈ ಆಸ್ಪತ್ರೆಯನ್ನು ಮತ್ತೆ ಕೋವಿಡ್ ಆಸ್ಪತ್ರೆ ಮಾಡಲಾಗುವುದು. ಅಲ್ಲದೇ ಸುಸಜ್ಜಿತ ಕೋವಿಡ್ ಕೇರ್ ಸೆಂಟರ್‌ವೊಂದನ್ನು ರಚಿಸಲು ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದೇನೆ ಎಂದರು.
ಈಗೀಗ ಕೋವಿಡ್ ಪರೀಕ್ಷೆಯು ನೆಗೆಟಿವ್ ಬಂದರೂ ಜನಕ್ಕೆ ಉಸಿರಾಟ ಸಮಸ್ಯೆ ಕಂಡುಬರುತ್ತಿದೆ. ಹೀಗಾಗಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಗಳಲ್ಲಿ ಹೆಚ್ಚು ಬೆಡ್‌ಗಳ ವ್ಯವಸ್ಥೆ ಮಾಡುತ್ತೇವೆ ಎಂದವರು ಭರವಸೆ ನೀಡಿದರು.
ವ್ಯಾಕ್ಸಿನೇಶನ್: ಉಡುಪಿಯಲ್ಲಿ ಸದ್ಯಕ್ಕೆ 2,45,000 ಲಕ್ಷ ಜನಕ್ಕೆ ವ್ಯಾಕ್ಸಿನೇಶನ್ ಆಗಿದೆ. ಉಡುಪಿ ಜಿಲ್ಲೆಗೆ ನಾಲ್ಕರಿಂದ ಆರು ಟನ್ ಆಕ್ಸಿಜನ್ ಅವಶ್ಯಕತೆ ಇದೆ. ಸದ್ಯ ಉಡುಪಿಯಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ. ಬಳ್ಳಾರಿಯಲ್ಲಿ ಲಿಕ್ವಿಡ್ ಆಕ್ಸಿಜನ್ ಇದ್ದರೂ ಸಾಗಾಟಕ್ಕೆ ಸಮಸ್ಯೆ ಇದೆ. ಇದಕ್ಕಾಗಿ ಟ್ಯಾಂಕರ್‌ನ್ನು ಬಳಸುವಂತೆ ಸೂಚಿಸಿದ್ದು, ಈ ಬಗ್ಗೆ ಎಡಿಜಿಪಿ ಪ್ರತಾಪ್ ರೆಡ್ಡಿ ಜೊತೆ ಮಾತನಾಡಿದ್ದೇನೆ. ವಿಶೇಷ ಟ್ಯಾಂಕರ್‌ಗಳ ಮೂಲಕ ಬಳ್ಳಾರಿಯಿಂದ ಬೆಳಪುವಿನ ಆಕ್ಸಿಜನ್ ರೀಫಿಲ್ಲಿಂಗ್ ಘಟಕಕ್ಕೆ ಇನ್ನು 2-3ದಿನಗಳಲ್ಲಿ ಲಿಕ್ವಿಡ್ ಆಕ್ಸಿಜನ್ ರವಾನೆ ಯಾಗಲಿದೆ ಎಂದರು.
ಜಿಲ್ಲೆಗೆ ಎರಡೂವರೆ ಸಾವಿರ ರೆಮಿಡಿಸಿವರ್ ಇಂಜೆಕ್ಷನ್ ಗೆ ಬೇಡಿಕೆ ಇದ್ದು, ಆರೋಗ್ಯ ಸಚಿವ ಡಾ.ಸುಧಾಕರ್ ಅವರೊಂದಿಗೆ ಮಾತನಾಡಿದ್ದು, ಸೋಮವಾರ ವ್ಯವಸ್ಥೆ ಮಾುವ ಭರವಸೆ ನೀಡಿದ್ದಾರೆ ಎಂದರು.
ವಿಶೇಷ ಟ್ಯಾಂಕರ್‌ಗಳ ಮೂಲಕ ಬಳ್ಳಾರಿಯಿಂದ ಬೆಳಪುವಿನ ಆಕ್ಸಿಜನ್ ರೀಫಿಲ್ಲಿಂಗ್ ಘಟಕಕ್ಕೆ ಇನ್ನು 2-3ದಿನಗಳಲ್ಲಿ ಲಿಕ್ವಿಡ್ ಆಕ್ಸಿಜನ್ ರವಾನೆ ಯಾಗಲಿದೆ ಎಂದರು.
ಜಿಲ್ಲೆಗೆ ಎರಡೂವರೆ ಸಾವಿರ ರೆಮಿಡಿಸಿವರ್ ಇಂಜೆಕ್ಷನ್ ಗೆ ಬೇಡಿಕೆ ಇದ್ದು, ಆರೋಗ್ಯ ಸಚಿವ ಡಾ. ಸುಧಾಕರ್ ಅವರೊಂದಿಗೆ ಮಾತನಾಡಿದ್ದು, ಸೋಮವಾರ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ ಎಂದರು.
ಪ್ರತಿವಾರ ಸಭೆ: ಪ್ರತಿ ವಾರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲು ಸೂಚಿಸಿದ್ದೇನೆ. ಮುಂದಿನ ವಾರದ ಕೋವಿಡ್ ಕಂಟ್ರೋಲ್ ಯೋಜನೆ ಯನ್ನು ಈಗಲೇ ರೂಪಿಸಲು ತಿಳಿಸಿದ್ದೇನೆ. ಐಎಂಎ ಜೊತೆ ಮಾತುಕತೆ ಮಾಡಲು ನಿರ್ಧರಿಸಲಾಗಿದೆ. ಜಿಲ್ಲೆಯ ಎಲ್ಲಾ ವೈದ್ಯರ ಬಳಕೆ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಲಾಗಿದೆ ಎಂದು ಉಡುಪಿಯ ಉಸ್ತುವಾರಿ ಸಚಿವರೂ ಆಗಿರು ಬಸವರಾಜ್ ಬೊಮ್ಮಾಯಿ ತಿಳಿಸಿದರು.







