ಕೊರೋನ ಬಗ್ಗೆ ಜನ ಜಾಗೃತರಾಗಲೇಬೇಕು: ಸಚಿವ ಬೊಮ್ಮಾಯಿ
'ಇನ್ನಷ್ಟು ಕಠಿಣ ಲಾಕ್‌ಡೌನ್‌ನ ಸೂಚನೆ'

ಉಡುಪಿ, ಮೇ 1: ಕೊರೋನಾದ ಈಗಿನ ಎರಡನೇ ಅಲೆ ಭಯಾನಕ ವಾಗಿದೆ. ಇದರ ಬಗ್ಗೆ ಜನ ಜಾಗೃತರಾಗಲೇ ಬೇಕಿದೆ. ಇದು ಸೋಂಕಿತ ಒಬ್ಬನಿಂದ ಹಲವರಿಗೆ ಸೋಂಕು ಹರಡುತ್ತಿದೆ. ಜನ ಸರಕಾರದ ಮಾರ್ಗಸೂಚಿ ಗಳನ್ನು ಕಟ್ಟುವನಿಟ್ಟಾಗಿ ಪಾಲಿಸಲೇ ಬೇಕಾಗಿದೆ. ಸರಕಾರ, ಜಿಲ್ಲಾಡಳಿತ ಹಾಗೂ ಜನತೆಯ ಜೊತೆಗಿದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಣಿಪಾಲದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತಾ ಲಾಕ್‌ಡೌನ್ ರಾಜ್ಯದಲ್ಲಿ ಇನ್ನಷ್ಟು ಕಠಿಣ ಮಾಡುವ ಅವಶ್ಯಕತೆ ಇದೆ. ಜನರ ಸಹಕಾರದಿಂದ ಮಾತ್ರ ಇದು ಯಶಸ್ವಿ ಆಗುತ್ತದೆ. ಈ ಜನತಾ ಲಾಕ್‌ಡೌನ್‌ನ ಫಲಿತಾಂಶ ಬರಲು 15 ದಿನ ಬೇಕಾಗುತ್ತದೆ. ಬೆಂಗಳೂರು, ಮೈಸೂರುಗಳಲ್ಲಿ ಕಠಿಣ ಕಾನೂನಿನ ಅಗತ್ಯ ಇದೆ ಎಂದವರು ನುಡಿದರು.
ಈಗಾಗಲೇ ರಾಜ್ಯಾದ್ಯಂತ ಘೋಷಣೆಯಾಗಿರುವ 14 ದಿನಗಳ ಕೊರೋನ ಕರ್ಫ್ಯೂವನ್ನು ಮುಂದುವರಿಸುವ ಕುರಿತು 12ನೇ ದಿನದಂದು ತಜ್ಞರ ಸಮಿತಿಯ ಸಭೆ ಕರೆದು ಚರ್ಚಿಸಲಾಗುವುದು. ತಜ್ಞರು ನೀಡುವ ಸೂಚನೆಯ ಮೇಲೆ ರಾಜ್ಯ ಸರಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ. ಎಲ್ಲಾ ಸಾಧ್ಯತೆಗಳನ್ನು ಸಮಗ್ರವಾಗಿ ಅವಲೋಕಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಕಟ್ಟುನಿಟ್ಟಿನ ನಿಯಮ: ರಾಜ್ಯದಲ್ಲಿ ಒಂದು ಲೋಕಸಭಾ ಸ್ಥಾನ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ನಾಳೆ ಬರಲಿದೆ. ನಾಳೆ ನಡೆಯುವ ಮತಗಳ ಎಣಿಕೆಗೆ ಕಟ್ಟುನಿಟ್ಟಿನ ನಿಯಮ ಜಾರಿ ಮಾಡುತ್ತೇವೆ ಚುನಾವಣಾ ಆಯೋಗ ಈಗಾಗಲೇ ಸೂಚನೆ ನೀಡಿದೆ. ಯಾವುದೇ ಸಂಭ್ರಮಾಚರಣೆಗೆ ಅವಕಾಶ ಇಲ್ಲ. ಸರಕಾರದ ಬಳಿ ಸಾಕಷ್ಟು ಆಕ್ಸಿಮೀಟರ್ ಇದೆ. ಬೇಡಿಕೆ ಜಾಸ್ತಿಯಾದ ಕಾರಣ ಮಾರುಕಟ್ಟೆಯಲ್ಲಿ ದರ ಹೆಚ್ಚಾಗಿದೆ ಎಂದರು.
ನಿನ್ನೆ ಬಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಮುಖಭಂಗ ವಾಗಿರುವ ವಿಚಾರದ ಬಗ್ಗೆ ಪ್ರಶ್ನಿಸಿದಾಗ, ಇಲ್ಲಿ ನಡೆದಿರುವುದು ಸ್ಥಳೀಯ ವಿಚಾರಗಳ ಚುನಾವಣೆ. ರಾಜ್ಯ -ದೇಶಮಟ್ಟದ ಚುನಾವಣೆ ನಡೆದಿಲ್ಲ. ಈ ಚುನಾವಣಾ ಫಲಿತಾಂಶ ಸರಕಾರದ ಮೇಲಿನ ಜನಾದೇಶ ಅಲ್ಲ ಎಂದು ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡರು.







