ದೇಶದಲ್ಲಿ ಮುಂದುವರಿದ ಕೋವಿಡ್ ಆರ್ಭಟ: ಒಂದೇ ದಿನ 3,700 ಮಂದಿ ಬಲಿ

ಹೊಸದಿಲ್ಲಿ, ಮೇ 2: ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕದ ಆರ್ಭಟ ಮುಂದುವರಿದಿದ್ದು, ಇದೇ ಮೊದಲ ಬಾರಿಗೆ ದೇಶದಲ್ಲಿ ಒಂದೇ ದಿನ 3,700ಕ್ಕೂ ಅಧಿಕ ಸೋಂಕಿತರು ಮೃತಪಟ್ಟಿದ್ದಾರೆ. ಆದರೆ ಶುಕ್ರವಾರ ಹೊಸ ಪ್ರಕರಣಗಳ ಸಂಖ್ಯೆ ಅಲ್ಪಮಟ್ಟಿಗೆ ಇಳಿಕೆಯಾಗಿದೆ. ಶುಕ್ರವಾರ 4 ಲಕ್ಷದ ಗಡಿ ದಾಟಿದ್ದ ಹೊಸ ಪ್ರಕರಣಗಳು ಶನಿವಾರ 3.92 ಲಕ್ಷಕ್ಕೆ ಇಳಿದಿವೆ.
ಶನಿವಾರ ಒಟ್ಟು 3,728 ಮಂದಿ ಸೋಂಕಿತರು ಕೊನೆಯುಸಿರೆಳೆದಿದ್ದಾರೆ. ಇದುವರೆಗೆ ಒಂದು ದಿನದಲ್ಲಿ ಅತ್ಯಧಿಕ ಅಂದರೆ 3,596 ಮಂದಿ ಬುಧವಾರ ಮೃತಪಟ್ಟಿದ್ದರು. ಈ ವಾರದಲ್ಲಿ ಮೂರನೇ ಬಾರಿಗೆ 3,500ಕ್ಕಿಂತ ಅಧಿಕ ಸಾವು ಸಂಭವಿಸಿದೆ. ದೇಶದ 14 ರಾಜ್ಯಗಳಲ್ಲಿ 100ಕ್ಕೂ ಅಧಿಕ ಸಾವು ವರದಿಯಾಗಿದೆ. ಉತ್ತರಾಖಂಡ (107 ಸಾವು) ಮತ್ತು ಜಾರ್ಖಂಡ್ (159) ನಂಥ ಸಣ್ಣ ರಾಜ್ಯಗಳು ಅಧಿಕ ಮರಣದರದಿಂದ ಕಂಗಾಲಾಗಿವೆ. ಈ ನಡುವೆ ಬಂಗಾಳದಲ್ಲಿ ಮೊದಲ ಬಾರಿಗೆ 100ಕ್ಕೂ ಅಧಿಕ ಸಾವು ಸಂಭವಿಸಿದೆ. ಶನಿವಾರ ರಾಜ್ಯದಲ್ಲಿ 103 ಸಾವು ವರದಿಯಾಗಿದೆ.
ಮಹಾರಾಷ್ಟ್ರ ಹಾಗೂ ದಿಲ್ಲಿ ಕೂಡಾ ಇದುವರೆಗಿನ ಗರಿಷ್ಠ ಸಾವಿನ ಸಂಖ್ಯೆಯನ್ನು ದಾಖಲಿಸಿವೆ. ಉಭಯ ರಾಜ್ಯಗಳಲ್ಲಿ ಕ್ರಮವಾಗಿ 802 ಮತ್ತು 412 ಮಂದಿ ಸೋಂಕಿತರು ಜೀವ ಕಳೆದುಕೊಂಡಿದ್ದಾರೆ. ಉತ್ತರ ಪ್ರದೇಶ (303), ಕರ್ನಾಟಕ(271), ಛತ್ತೀಸ್‌ಗಢ (282) ಮತ್ತು ಗುಜರಾತ್ (172) ನಂತರದ ಸ್ಥಾನಗಳಲ್ಲಿವೆ.
ದೇಶದಲ್ಲಿ ಒಟ್ಟಾರೆ ಪ್ರಕರಣಗಳ ಸಂಖ್ಯೆ ಶುಕ್ರವಾರಕ್ಕೆ ಹೋಲಿಸಿದರೆ 10 ಸಾವಿರದಷ್ಟು ಕಡಿಮೆಯಾಗಿದ್ದರೂ, ಒಂಭತ್ತು ರಾಜ್ಯಗಳು ಶನಿವಾರ ಗರಿಷ್ಠ ಪ್ರಕರಣಗಳನ್ನು ದಾಖಲಿಸಿವೆ. ತಮಿಳುನಾಡು, ಆಂಧ್ರ ಪ್ರದೇಶ, ರಾಜಸ್ಥಾನ, ಬಂಗಾಳ, ಒಡಿಶಾ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಹಾಗೂ ಪುದುಚೇರಿಯಲ್ಲಿ ಇದುವರೆಗಿನ ಗರಿಷ್ಠ ಪ್ರಕರಣಗಳು ಶನಿವಾರ ದಾಖಲಾಗಿವೆ. ದೇಶದಲ್ಲಿ ಮಹಾರಾಷ್ಟ್ರ 63,282 ಪ್ರಕರಣದೊಂದಿಗೆ ಅಗ್ರಸ್ಥಾನಿಯಾಗಿದ್ದರೆ, ಕರ್ನಾಟಕ 40,990 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.