ಭರ್ಜರಿ ಗೆಲುವಿನ ಬೆನ್ನಲ್ಲೇ ಚುನಾವಣಾ ತಂತ್ರಜ್ಞ ಸ್ಥಾನ ತೊರೆಯುವುದಾಗಿ ಪ್ರಶಾಂತ್ ಕಿಶೋರ್ ಘೋಷಣೆ

ಹೊಸದಿಲ್ಲಿ: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಹಾದಿಯಲ್ಲಿದ್ದು, ಈ ಗೆಲುವಿಗೆ ತಂತ್ರ ಹೆಣೆದಿದ್ದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಎನ್‌ಡಿಟಿವಿಯೊಂದಿಗೆ ಮಾತನಾಡುತ್ತಿದ್ದಾಗ, ನಾನು "ಈ ಜಾಗವನ್ನು ತೊರೆಯುತ್ತೇನೆ’’ ಎಂದು ಘೋಷಿಸುವ ಮೂಲಕ ಬಾಂಬ್ ಸಿಡಿಸಿದ್ದಾರೆ.
"ನಾನು ಈಗ ಮಾಡುತ್ತಿರುವ ಕೆಲಸವನ್ನು ಮುಂದುವರಿಸಲು ಬಯಸುವುದಿಲ್ಲ. ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ವಿರಾಮ ತೆಗೆದುಕೊಂಡು ಜೀವನದಲ್ಲಿ ಇನ್ನೇನಾದರೂ ಮಾಡುವ ಸಮಯ ಬಂದಿದೆ. ನಾನು ಈ ಜಾಗವನ್ನು ತ್ಯಜಿಸಲು ಬಯಸುತ್ತೇನೆ" ಎಂದು ಕಿಶೋರ್ ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದರು.
ತಾವು ಮತ್ತೆ ರಾಜಕೀಯಕ್ಕೆ ಸೇರುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು: "ನಾನು ವಿಫಲ ರಾಜಕಾರಣಿ. ನಾನು ಏನು ಮಾಡಬೇಕು ಎಂದು ನೋಡಬೇಕು. ತಮ್ಮ ಕುಟುಂಬದೊಂದಿಗೆ ಅಸ್ಸಾಂಗೆ ಹೋಗಿ "ಚಹಾ ತೋಟಗಾರಿಕೆ" ಮಾಡುವ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಡಿಸೆಂಬರ್ 21ರಂದು ಪಶ್ಚಿಮಬಂಗಾಳದ ಚುನಾವಣೆಯ ಕುರಿತು ಮಾತನಾಡಿದ್ದ ಕಿಶೋರ್, "ಮಾಧ್ಯಮಗಳ ಭಾರೀ ಪ್ರಚಾರದ ನಡುವೆಯೂ ವಾಸ್ತವದಲ್ಲಿ ಪಶ್ಚಿಮಬಂಗಾಳದಲ್ಲಿ ಬಿಜೆಪಿ ಎರಡಂಕಿಯನ್ನು ಸ್ಥಾನ ತಲುಪಲು ಹೆಣಗಾಡಲಿದೆ. ಒಂದು ವೇಳೆ ಆ ಪಕ್ಷ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇ ಆದಲ್ಲಿ ನಾನು ಈ ಕ್ಷೇತ್ರವನ್ನು ತ್ಯಜಿಸುತ್ತೇನೆ. ದಯವಿಟ್ಟು ಈ ಟ್ವೀಟನ್ನು ಉಳಿಸಿಕೊಳ್ಳಿ'' ಎಂದು ಸವಾಲು ಹಾಕಿದ್ದರು.
ಕಿಶೋರ್ 4 ತಿಂಗಳ ಹಿಂದೆ ಹೇಳಿರುವ ಮಾತು ಈ ನಿಜವಾಗುತ್ತಿರುವಂತೆ ಕಂಡುಬಂದಿದ್ದು, ಬಿಜೆಪಿಯು 294 ಕ್ಷೇತ್ರಗಳಲ್ಲಿ 84 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಟಿಎಂಸಿ 204 ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ.ಇನ್ನೂ ಅಂತಿಮ ಫಲಿತಾಂಶ ಪ್ರಕಟವಾಗಿಲ್ಲವಾದರೂ ಈಗಿನ ಟ್ರೆಂಡ್ ಪ್ರಕಾರ ಬಿಜೆಪಿ 100 ಸ್ಥಾನ ಗೆಲ್ಲುವುದು ಅಸಾಧ್ಯದ ಮಾತಾಗಿದೆ.
ಪಶ್ಚಿಮಬಂಗಾಳದಲ್ಲಿ ಚುನಾವಣಾ ಆಯೋಗವು ಭಾಗಶಃ ನಮ್ಮ ಅಭಿಯಾನವನ್ನು ಕಷ್ಟಕರಗೊಳಿಸಿತು. ಆದರೆ ತೃಣಮೂಲವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಜನರು ಯಾವಾಗಲೂ ನಂಬುತ್ತಾರೆ. ಮೋದಿಯವರ (ಪ್ರಧಾನಿ ನರೇಂದ್ರ ಮೋದಿ) ಜನಪ್ರಿಯತೆಯು ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಗೆ ಗೆಲುವು ತಂದುಕೊಡುತ್ತದೆ ಎಂದು ಅರ್ಥವಲ್ಲ" ಎಂದು ಕಿಶೋರ್ ಹೇಳಿದ್ದಾರೆ.