ವೈದ್ಯನ ಆತ್ಮಹತ್ಯೆ ಪ್ರಕರಣ: ವ್ಯವಸ್ಥೆಯಿಂದ ನಡೆದ ಕೊಲೆಯಲ್ಲದೆ ಬೇರೇನೂ ಅಲ್ಲ ಎಂದ ಐಎಂಎಯ ಮಾಜಿ ವರಿಷ್ಠ

ಹೊಸದಿಲ್ಲಿ, ಮೆ 2: ದಿಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿವಾಸಿ ವೈದ್ಯರೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ವ್ಯವಸ್ಥೆಯಿಂದ ನಡೆದ ಕೊಲೆಯಲ್ಲದೆ ಬೇರೇನೂ ಅಲ್ಲ ಎಂದು ಭಾರತೀಯ ವೈದ್ಯಕೀಯ ಸಂಘಟನೆಯ ಮಾಜಿ ವರಿಷ್ಠ ಶನಿವಾರ ಆರೋಪಿಸಿದ್ದಾರೆ. ‘‘ಮೂಲಭೂತ ಆರೋಗ್ಯ ಸೌಲಭ್ಯಗಳ ಕೊರತೆ ಸೃಷ್ಟಿಸಿದ ಹತಾಶೆಯಿಂದ ಇದು ಸಂಭವಿಸಿದೆ’’ ಎಂದು 2018ರಿಂದ 2021ರ ವರೆಗೆ ಭಾರತೀಯ ವೈದ್ಯಕೀಯ ಸಂಘಟನೆಯ ರಾಷ್ಟ್ರಾಧ್ಯಕ್ಷರಾಗಿದ್ದ ಡಾ. ರವಿ ವಾಂಖೇಡ್ಕರ್ ಹೇಳಿದ್ದಾರೆ.
‘‘ಕೆಟ್ಟ ವಿಜ್ಞಾನ, ಕೆಟ್ಟ ರಾಜಕೀಯ ಹಾಗೂ ಕೆಟ್ಟ ಆಡಳಿತ’’ ಎಂದು ಅವರು ಪ್ರತಿಪಾದಿಸಿದ್ದಾರೆ. ವೈದ್ಯ ವಿವೇಕ್ ರಾಯ್ ಅವರು ಮಾಳವೀಯ ನಗರದಲ್ಲಿರುವ ತನ್ನ ನಿವಾಸದಲ್ಲಿ ಶುಕ್ರವಾರ ಆತ್ಮಹತ್ಯೆಗೆ ಶರಣಾಗಿದ್ದರು. ರಾಯ್ ಅವರ ಆತ್ಮಹತ್ಯಾ ಪತ್ರ ಪತ್ತೆಯಾಗಿತ್ತು. ಆದರೆ, ಆತ್ಮಹತ್ಯೆಗೆ ಕಾರಣವನ್ನು ಅವರು ಉಲ್ಲೇಖಿಸಿರಲಿಲ್ಲ ಎಂದು ದಕ್ಷಿಣ ದಿಲ್ಲಿಯ ಉಪ ಪೊಲೀಸ್ ಆಯುಕ್ತ ದೇವಂದರ್ ಆರ್ಯ ಹೇಳಿದ್ದರು. ಸರಣಿ ಟ್ವೀಟ್‌ನಲ್ಲಿ ವಾಂಖೇಡ್ಕರ್, ರಾಯ್ ಅವರು ದಿಲ್ಲಿಯ ಸಾಕೇತ್‌ನ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿವಾಸಿ ವೈದ್ಯ. ಕಳೆದ ಒಂದು ತಿಂಗಳಿಂದ ಅವರು ತೀವ್ರ ನಿಗಾ ಘಟಕದಲ್ಲಿ ಪ್ರತಿದಿನ 7ರಿಂದ 8 ರೋಗಿಗಳಿಗೆ ಸಿಪಿಆರ್, ಎಸಿಎಲ್‌ಸಿ ಒದಗಿಸುತ್ತಿದ್ದರು. ಆದರೆ, ಅವರಲ್ಲಿ ಹೆಚ್ಚಿನವರು ಬದುಕುಳಿಯಲಿಲ್ಲ ಎಂದಿದ್ದಾರೆ. ತನ್ನ ಎದುರಲ್ಲೇ ಸಾವನ್ನಪ್ಪುವ ರೋಗಿಗಳು ಅನುಭವಿಸಿದ ಸಂಕಷ್ಟ ಹಾಗೂ ಭಾವನೆಗಳನ್ನು ನೋಡುತ್ತಾ ಹತಾಶೆಗೆ ಒಳಗಾಗಿ ಬದುಕುವುದಕ್ಕಿಂತ ಸಾಯುವುದೇ ಉತ್ತಮ ಎಂದು ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಡಾ. ರವಿ ವಾಂಖೇಡ್ಕರ್ ತಿಳಿಸಿದ್ದಾರೆ.





