ವಿಧಾನಸಭಾ ಉಪಚುನಾವಣೆ: ಗುಜರಾತ್ ; ಮೋರ್ವಾ ಹಡಫ್ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು

ಅಹ್ಮದಾಬಾದ್,ಮೇ 2: ಗುಜರಾತಿನ ಪಂಚಮಹಲ್ ಜಿಲ್ಲೆಯ ಮೋರ್ವಾ ಹದಾಫ್ ವಿಧಾನಸಭಾ ಕ್ಷೇತ್ರ(ಎಸ್‌ಟಿ)ದ ಉಪಚುನಾವಣೆಯ ಫಲಿತಾಂಶ ರವಿವಾರ ಪ್ರಕಟವಾಗಿದ್ದು,ಬಿಜೆಪಿಯ ನಿಮಿಷಾ ಸುತಾರ್ ಅವರು ತನ್ನ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸುರೇಶ ಕಟಾರಾರನ್ನು 45,649 ಮತಗಳಿಂದ ಪರಾಭವಗೊಳಿಸಿದ್ದಾರೆ. ಚಲಾವಣೆಯಾಗಿದ್ದ ಒಟ್ಟು 93,179 ಮತಗಳ ಪೈಕಿ ಸುತಾರ್ ಅವರಿಗೆ 67,457 ಮತ್ತು ಕಟಾರಾ ಅವರಿಗೆ 21,808 ಮತಗಳು ಬಿದ್ದಿವೆ. ಪಕ್ಷೇತರ ಅಭ್ಯರ್ಥಿ ಸುಶೀಲಾಬೆನ್ ಮೈಡಾ ಅವರಿಗೆ 2,371 ಮತಗಳು ಲಭಿಸಿದ್ದರೆ,1,527 ಮತಗಳು ‘ನೋಟಾ’ದ ಪಾಲಾಗಿವೆ ಮತ್ತು 16 ಮತಗಳು ಅಸಿಂಧುಗೊಂಡಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅನೂರ್ಜಿತ ಜಾತಿ ಪ್ರಮಾಣಪತ್ರವನ್ನು ಸಲ್ಲಿಸಿದ್ದಕ್ಕಾಗಿ ಮೇ 2019ರಲ್ಲಿ ಪಕ್ಷೇತರ ಶಾಸಕ ಭೂಪೇಂದ್ರಸಿಂಹ ಖಾಂಟ್ ಅವರ ಅನರ್ಹತೆಯಿಂದಾಗಿ ಮೋರ್ವಾ ಹಡಫ್ ಕ್ಷೇತ್ರವು ತೆರವುಗೊಂಡಿತ್ತು. ಗುಜರಾತ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿ ಅಲ್ಲಿ ಸೋಲು ಕಂಡಿದ್ದ ಖಾಂಟ್ ಈ ವರ್ಷದ ಜನವರಿಯಲ್ಲಿ ಅನಾರೋಗ್ಯದಿಂದಾಗಿ ನಿಧನರಾಗಿದ್ದರು.





