ಮಮತಾ ಬ್ಯಾನರ್ಜಿ ಕ್ರೂರ ಮಹಿಳೆ, ಬಂಗಾಳ ಜನತೆ ಐತಿಹಾಸಿಕ ತಪ್ಪು ಮಾಡಿದ್ದಾರೆ: ಸಂಸದ ಬಾಬುಲ್ ಸುಪ್ರಿಯೊ

ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಅನ್ನು ಅಭಿನಂದಿಸಲು ನಿರಾಕರಿಸಿದ ಬಿಜೆಪಿ ಸಂಸದ, ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರು ಸಂಪ್ರದಾಯವನ್ನು ಮುರಿದರು.
ಬಂಗಾಳಿ ಮತದಾರರು "ಐತಿಹಾಸಿಕ ತಪ್ಪು" ಮಾಡಿದ್ದಾರೆ ಎಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿರುವ ಸುಪ್ರಿಯೋ, ಟಿಎಂಸಿ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಓರ್ವ "ಕ್ರೂರ ಮಹಿಳೆ" ಎಂಬ ಹಣೆಪಟ್ಟಿ ಕಟ್ಟಿದ್ದಾರೆ.
"ನಾನು ಮಮತಾ ಬ್ಯಾನರ್ಜಿಯವರನ್ನು ಅಭಿನಂದಿಸುವುದಿಲ್ಲ ... ಜನರ ತೀರ್ಪನ್ನು ನಾನು ಗೌರವಿಸುತ್ತೇನೆ" ಎಂದು ಹೇಳಲು ಬಯಸುವುದಿಲ್ಲ ... ಬಿಜೆಪಿಗೆ ಅವಕಾಶ ನೀಡದೆ ಬಂಗಾಳದ ಜನರು ಐತಿಹಾಸಿಕ ತಪ್ಪು ಮಾಡಿದ್ದಾರೆ ಎಂದು ಪ್ರಾಮಾಣಿಕವಾಗಿ ಭಾವಿಸುತ್ತೇನೆ ... ಈ ಭ್ರಷ್ಟ, ಅಸಮರ್ಥರನ್ನು ಆಯ್ಕೆ ಮಾಡುವ ಮೂಲಕ , ಅಪ್ರಾಮಾಣಿಕ ಸರ್ಕಾರ ಮತ್ತು ಕ್ರೂರ ಮಹಿಳೆ ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಲಾಗಿದೆ "ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
"ಹೌದು, ಕಾನೂನು ಪಾಲಿಸುವ ಪ್ರಜೆಯಾಗಿ, ಪ್ರಜಾಪ್ರಭುತ್ವ ದೇಶದಲ್ಲಿ ಜನರು ತೆಗೆದುಕೊಳ್ಳುವ ನಿರ್ಧಾರವನ್ನು ನಾನು 'ಪಾಲಿಸುತ್ತೇನೆ' ... ಅಷ್ಟೇ !! ಹೆಚ್ಚೇನೂ ಇಲ್ಲ - ಕಡಿಮೆ ಏನೂ ಇಲ್ಲ !!" ಸುಪ್ರಿಯೋ ಘೋಷಿಸಿದರು. ನಂತರ ಪೋಸ್ಟ್ ಅನ್ನು ಅಳಿಸಲಾಗಿದೆ.
ಬಿಜೆಪಿಯಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ನಾಲ್ವರು ಸಂಸದರಲ್ಲಿ ಒಬ್ಬರಾದ ಸುಪ್ರಿಯೋ ಟೋಲಿಗಂಜ್‌ನಿಂದ ತೃಣಮೂಲದ ಅರೂಪ್ ಬಿಸ್ವಾಸ್ ವಿರುದ್ಧ 50,000 ಮತಗಳಿಂದ ಸೋತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದ ಮಮತಾ ಬ್ಯಾನರ್ಜಿಗೆ ಅಭಿನಂದನೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರೂ ಆಗಿರುವ ಸುಪ್ರಿಯೋ ಅವರ ನಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.







