ಜಮಾಅತೆ ಇಸ್ಲಾಮಿ ಹಿಂದ್'ನ ಮಾಜಿ ಉಪಾಧ್ಯಕ್ಷ ನುಸ್ರತ್ ಅಲಿ ನಿಧನ

ಹೊಸದಿಲ್ಲಿ : ಮರ್ಕಝಿ ತಾಲಿಮಿ ಕೌನ್ಸಿಲ್, ಜಮಾಅತೆ ಇಸ್ಲಾಮಿ ಹಿಂದ್ (ಜಮಾಅತೆ ಇಸ್ಲಾಮಿ ಹಿಂದ್'ನ ಕೇಂದ್ರ ಶೈಕ್ಷಣಿಕ ಮೇಲ್ವಿಚಾರಣಾ ಸಂಸ್ಥೆ) ಇದರ ಅಧ್ಯಕ್ಷ ಹಾಗೂ ಜಮಾಅತೆ ಇಸ್ಲಾಮಿ ಹಿಂದ್'ನ ಮಾಜಿ ಉಪಾಧ್ಯಕ್ಷರಾದ ನುಸ್ರತ್ ಅಲಿ ಅವರು ರವಿವಾರ ನಿಧನರಾದರು.
ದೆಹಲಿಯ ಜಮಾಅತೆ ಇಸ್ಲಾಮಿ ಹಿಂದ್'ನ ಕೇಂದ್ರ ಕಚೇರಿಯ ವಠಾರದಲ್ಲಿರುವ ಅಲ್ ಶಿಫಾ ಆಸ್ಪತ್ರೆಯಲ್ಲಿ ಕಳೆದ ಹದಿನೈದು ದಿನಗಳಿಂದ ಕೋವಿಡ್ ಕಾರಣ ಚಿಕಿತ್ಸೆ ಪಡೆಯುತ್ತಿದ್ದರು.
ಮೂಲತಃ ಉತ್ತರ ಪ್ರದೇಶದ ಮೀರತ್'ನವರಾದ ನುಸ್ರತ್ ಅಲಿ ಸಿದ್ಧಾಂತ ನಿಷ್ಠ ವಿಚಾರವಾದಿ, ವಿದ್ವಾಂಸ ಹಾಗೂ ಜಮಾಅತೆ ಇಸ್ಲಾಮಿ ಹಿಂದ್'ನ ಹಿರಿಯ ನಾಯಕರಾಗಿದ್ದರು. ಈ ಹಿಂದೆ ಜಮಾಅತೆ ಇಸ್ಲಾಮಿ ಹಿಂದ್ ಉತ್ತರ ಪ್ರದೇಶದ ಅಧ್ಯಕ್ಷರು ಕೂಡ ಆಗಿದ್ದರು. ಅಲ್ಲದೆ ಸಂಘಟನೆಯ ವಿವಿಧ ಜವಾಬ್ದಾರಿಗಳನ್ನೂ ನಿಭಾಯಿಸಿದ್ದರು. ಸದ್ಯ ಜಮಾಅತೆ ಇಸ್ಲಾಮಿ ಹಿಂದ್'ನ ಕೇಂದ್ರ ಸಲಹಾ ಸಮಿತಿ ಹಾಗೂ ಕೇಂದ್ರ ಪ್ರತಿನಿಧಿ ಸಭೆಗಳ ಸದಸ್ಯರಾಗಿದ್ದರು.
ಅವರು ಮುಸ್ಲಿಮ್ ಮಜ್ಲಿಸೆ ಮಶಾವರತ್ ಹಾಗೂ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಇವುಗಳ ಕಾರ್ಯಕಾರಿ ಸಮಿತಿಗಳ ಸದಸ್ಯರೂ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಶಿಕ್ಷಣ ತಜ್ಞನಾಗಿ ಅವರು ಸಲ್ಲಿಸಿದ ಸೇವೆ ಅನುಪಮ, ಸಮುದಾಯವನ್ನು ಶೈಕ್ಷಣಿಕವಾಗಿ ಮೇಲೆತ್ತುವ ಪ್ರಯತ್ನದಲ್ಲಿ ಪ್ರಮುಖ ಪಾತ್ರವಹಿಸಿದ್ದರು.





