ಬಂಧನದಲ್ಲಿರುವ ರೈತ ಹೋರಾಟಗಾರ ರೈಜೋರ್ ದಳದ ಅಖಿಲ್ ಗೊಗೋಯಿಗೆ ಗೆಲುವು

photo: twitter(@RamanDhaka)
ದಿಸ್ಪುರ, ಮೆ 2: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಪಾಲ್ಗೊಂಡ ಆರೋಪದಲ್ಲಿ 2019 ಡಿಸೆಂಬರ್ನಿಂದ ಬಂಧನದಲ್ಲಿರುವ ರೈತ ಹೋರಾಟಗಾರ ಹಾಗೂ ರೈಜೋರ್ ದಳದ ಅಧ್ಯಕ್ಷ ಅಖಿಲ್ ಗೊಗೋಯಿ ಅಸ್ಸಾಂನ ಸಿಬ್ಸಾಗರ್ ಕ್ಷೇತ್ರದಿಂದ ಜಯ ಗಳಿಸಿದ್ದಾರೆ. ಈಗ ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿರುವ 45ರ ಹರೆಯದ ಅಖಿಲ್ ಗೊಗೋಯಿ ಬಿಜೆಪಿಯ ಸುರಭಿ ರಾಜ್ಕೊನ್ವಾರಿ ಅವರನ್ನು ಸೋಲಿಸಿದ್ದಾರೆ.
‘‘ನಾವು ಇನ್ನಷ್ಟೆ ಚುನಾವಣಾ ಅಧಿಕಾರಿಗಳಿಂದ ಅಧಿಕೃತ ದೃಢೀಕರಣ ಪಡೆಯಬೇಕಿದೆ’’ ಎಂದು ರೈಜೋರ್ ದಳದ ಕಾರ್ಯಾಧ್ಯಕ್ಷ ಭಾಸ್ಕೊ ಡೆ ಸೈಕಿಯಾ ಅವರು ತಿಳಿಸಿದ್ದಾರೆ. ರೈಜೋರಿ ದಳವನ್ನು ಕಳೆದ ವರ್ಷ ಅಕ್ಟೋಬರ್ನಲ್ಲಿ ಆರಂಭಿಸಲಾಗಿತ್ತು. ಅಖಿಲ್ ಗೊಗೋಯಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಹೆಸರಿಸಲಾಗಿತ್ತು. ಅವರು ಆಸ್ಪತ್ರೆಯಿಂದಲೇ ನಾಮಪತ್ರ ಸಲ್ಲಿಸಿದ್ದರು. ಆದರೆ, ಅವರಿಗೆ ಪ್ರಚಾರ ನಡೆಸಲು ಸಾಧ್ಯವಾಗಿರಲಿಲ್ಲ. ಈ ಚುನಾವಣೆಯಲ್ಲಿ ಅವರು ಅಸ್ಸಾಂ ಜಾತೀಯ ಪರಿಷದ್ (ಎಜೆಪಿ) ಹಾಗೂ ನೂತನವಾಗಿ ರೂಪಿಸಲಾದ ಇನ್ನೊಂದು ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದರು.