ಸ್ಥಾನ ಕಡಿಮೆಯಾದರೂ ಮತಗಳಿಕೆಯಲ್ಲಿ ಬಿಜೆಪಿಗೆ ಅಗ್ರಸ್ಥಾನ: ಸಂಸದ ನಳಿನ್
ಮಂಗಳೂರು, ಮೇ 2: ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅದ್ಭುತವಾದ ಪ್ರದರ್ಶನ ನೀಡಿದೆ. ಸ್ಥಾನ ಕಡಿಮೆಯಾಗಿದ್ದರೂ ಮತ ಗಳಿಕೆಯಲ್ಲಿ ಬಿಜೆಪಿ ಅಗ್ರಸ್ಥಾನದಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಪ್ರತಿಕ್ರಿಯಿಸಿದ್ದಾರೆ.
ಕೊರೋನ ಭೀತಿಯ ನಡುವೆಯೂ ಕುತೂಹಲ ಕೆರಳಿಸಿದ್ದ ಐದು ರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಅವರು, ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಪರ ಜನ ಒಲವು ತೋರಿಸಿದ್ದಾರೆ. ಅಲ್ಲಿ ದೀದಿಯ ಪ್ರಭಾವ ಕಡಿಮೆಯಾಗಿರೋದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.
ಪುದುಚೇರಿ ಅಸ್ಸಾಂನಲ್ಲಿ ಬಿಜೆಪಿ ಕಮಾಲ್ ಮಾಡಿದೆ. ಪುದುಚೇರಿಯಂತಹ ಕೇಂದ್ರಾಡಳಿತ ಪ್ರದೇಶದಲ್ಲಿ ಮೊದಲ ಬಾರಿಗೆ ಬಿಜೆಪಿ ಜಯಭೇರಿ ಬಾರಿಸಿದೆ. ಕಾಂಗ್ರೆಸ್ ಅನ್ನು ಜನ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಕೇರಳದಲ್ಲೂ ಬಿಜೆಪಿ ಸಾಧನೆ ಉತ್ತಮವಾಗಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಮೂರು ಕ್ಷೇತ್ರಗಳ ಉಪ ಚುನಾವಣೆ ವಿಚಾರ ಪ್ರತಿಕ್ರಿಯಿಸಿದ ಅವರು, ಮಸ್ಕಿಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿರುವುದು ನಿಜ. ಆದರೆ ಬಸವಕಲ್ಯಾಣದಲ್ಲಿ ಅಮೋಘ ಗೆಲುವಾಗಿದೆ ಎಂದು ಅವರು ಹೇಳಿದರು.







