ತನ್ನ ರಾಜ್ಯದ ʼಜನತೆ ದೇಶವನ್ನು ರಕ್ಷಿಸಿದರುʼ: ಮಮತಾ ಬ್ಯಾನರ್ಜಿ

ಕೋಲ್ಕತಾ, ಮೆ 2: ಪಶ್ಚಿಮಬಂಗಾಳದಲ್ಲಿ ಟಿಎಂಸಿ ಗೆಲುವನ್ನು ಜನತೆಯ ಗೆಲವು ಎಂದು ರವಿವಾರ ಕರೆದಿರುವ ತೃಣಮೂಲ ಕಾಂಗ್ರೆಸ್(ಟಿಎಂಸಿ) ವರಿಷ್ಠೆ ಮಮತಾ ಬ್ಯಾನರ್ಜಿ, ತನ್ನ ರಾಜ್ಯದ ಜನತೆ ‘ದೇಶವನ್ನು ರಕ್ಷಿಸಿದರು’ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದಿದ್ದಾರೆ.
ಪಶ್ಚಿಮಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಜಯಭೇರಿ ಬಾರಿಸಿರುವುದರಿಂದ ಮಮತಾ ಬ್ಯಾನರ್ಜಿ ನಿರಂತರ ಮೂರನೇ ಬಾರಿಗೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸುವುದು ಬಹುತೇಕ ಖಚಿತವಾಗಿದೆ. ಕೋಲ್ಕತಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಕೊಳಕು ರಾಜಕೀಯ ಮಾಡಿತು ಹಾಗೂ ಚುನಾವಣೆಯಲ್ಲಿ ಸೋತಿತು. ಚುನಾವಣಾ ಆಯೋಗ ನಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿತು. ಅದು ಬಿಜೆಪಿಯ ವಕ್ತಾರನಂತೆ ವರ್ತಿಸಿತು. ‘ಆಟ ಆರಂಭ’ ಹಾಗೂ ‘ಬಂಗಾಳಕ್ಕೆ ಜಯ’ ಎಂಬ ನಮ್ಮ ಎರಡು ಘೋಷಣಾ ವಾಕ್ಯ ಯಶಸ್ವಿಯಾಯಿತು. ಬಂಗಾಳ ಮ್ಯಾಚ್ನಲ್ಲಿ ಜಯ ಗಳಿಸಿತು. ನಾವು ಗ್ರಾಮೀಣ ಬಂಗಾಳಕ್ಕೆ 50,000 ಫುಟ್ಬಾಲ್ಗಳನ್ನು ವಿತರಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ತನ್ನ ಒಂದು ಕಾಲದ ಆಪ್ತ ಸಹಾಯಕ ಹಾಗೂ ಈಗ ಬಿಜೆಪಿ ಅಭ್ಯರ್ಥಿಯಾಗಿರುವ ಸುವೇಂಧು ಅಧಿಕಾರಿ ವಿರುದ್ಧ ಸೊಲೊಪ್ಪಿದ ಕ್ಷೇತ್ರವಾದ ನಂದಿಗ್ರಾಮ ಬಗ್ಗೆ ಮಾತನಾಡಿದ ಅವರು, ‘‘ನಂದಿಗ್ರಾಮದ ಬಗ್ಗೆ ಆತಂಕಿತರಾಗಬೇಡಿ. ಹೋರಾಟಕ್ಕಾಗಿ ನೀವು ಏನನ್ನಾದರೂ ತ್ಯಾಗ ಮಾಡಬೇಕು. ನಾನು ಚಳವಳಿಯಲ್ಲಿ ಹೋರಾಡಿದ ಕಾರಣಕ್ಕೆ ನಂದಿಗ್ರಾಮದಲ್ಲಿ ಸೆಣಸಾಡಿದೆ. ಪರವಾಗಿಲ್ಲ. ಜನರು ಬಯಸಿದ ಯಾವುದೇ ತೀರ್ಪನ್ನು ನೀಡಲಿ. ನಾನು ಅದನ್ನು ಸ್ವೀಕರಿಸುತ್ತೇನೆ. ಅನ್ಯಥಾ ಭಾವಿಸುವುದಿಲ್ಲ. ನಾವು ಫಲಿತಾಂಶವನ್ನು ಮರು ಪರಿಶೀಲನೆ ನಡೆಸಲಿದ್ದೇವೆ. ಅಗತ್ಯ ಬಿದ್ದರೆ ನ್ಯಾಯಾಲಯದ ಮೆಟ್ಟಿಲೇರಲಿದ್ದೇವೆ. ಫಲಿತಾಂಶ ಘೋಷಣೆಯಾದ ಬಳಿಕ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ ಎಂಬ ಬಗ್ಗೆ ನನಗೆ ಮಾಹಿತಿ ಇದೆ. ಅದನ್ನು ನಾನು ಬಯಲು ಮಾಡಲಿದ್ದೇನೆ. ಆದರೆ, ನಾವು 215ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದಿದ್ದೇವೆ. ಬಿಜೆಪಿ ಸೋತಿದೆ’’ ಎಂದರು.
ಕೋವಿಡ್ ವಿರುದ್ಧ ಹೋರಾಡುವುದು ನಮ್ಮ ಆದ್ಯತೆ. ಪ್ರಸಕ್ತ ಪರಿಸ್ಥಿತಿಯ ಕಾರಣಕ್ಕೆ ಪ್ರಮಾಣ ವಚನ ಸರಳವಾಗಿ ನಡೆಯಲಿದೆ. ನಾವು ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡಲಿದ್ದೇವೆ. ಅಲ್ಲದೆ ಎಲ್ಲರಿಗೂ ಉಚಿತ ಲಸಿಕೆ ನೀಡುವಂತೆ ಕೇಂದ್ರವನ್ನು ಆಗ್ರಹಿಸಲಿದ್ದೇವೆ. ನಮ್ಮ ಆಗ್ರಹ ಈಡೇರದೇ ಇದ್ದರೆ, ನಾನು ಗಾಂಧಿ ಮೂರ್ತಿ (ಕೋಲ್ಕತಾ) ಎದುರು ಧರಣಿ ನಡೆಸಲಿದ್ದೇನೆ ಎಂದು ಬ್ಯಾನರ್ಜಿ ಹೇಳಿದ್ದಾರೆ.





