ಸುಪ್ರೀಂ ಆದೇಶದ ಬೆನ್ನಲ್ಲೇ ಗೋಕರ್ಣ ದೇವಸ್ಥಾನ ನಿವೃತ್ತ ನ್ಯಾ.ನೇತೃತ್ವದ ಸಮಿತಿಗೆ ಹಸ್ತಾಂತರ

ಬೆಂಗಳೂರು, ಮೇ 2: ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ಸುಪ್ರೀಂಕೋರ್ಟ್ ಆದೇಶದಂತೆ ರಾಮಚಂದ್ರಾಪುರ ಮಠದ ಆಡಳಿತ ಮಂಡಳಿಯು ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಗೆ ಹಸ್ತಾಂತರಿಸಿದೆ.
ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ ಎಂಬ ದೃಷ್ಟಿಯಿಂದ 2008ರಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿತ್ತು. ಆದರೆ, ಇದನ್ನು ಪ್ರಶ್ನಿಸಿ ದೇವಸ್ಥಾನದ ಮೂಲ ಟ್ರಸ್ಟಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಒಂದಿಡೀ ದಶಕ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ 2018ರ ಸಪ್ಟೆಂಬರ್ ನಲ್ಲಿ ದೇವಸ್ಥಾನದ ನಿರ್ವಹಣೆಗೆ ಸಮಿತಿ ರಚಿಸಿ, ಅವರ ಸುಪರ್ದಿಗೆ ನೀಡುವಂತೆ ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ಮಠ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು, ಇದೀಗ ಸುಪ್ರೀಂ ಕೋರ್ಟ್ ಕೂಡ ದೇವಸ್ಥಾನವನ್ನು ಮಠಕ್ಕೆ ಹಸ್ತಾಂತರಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವುದಲ್ಲದೇ, ನಿವೃತ್ತ ನ್ಯಾಯಮೂರ್ತಿ ಬಿ.ಎನ್ ಶ್ರೀಕೃಷ್ಣ ಅವರ ನೇತೃತ್ವದ ಸಮಿತಿಗೆ ದೇವಾಲಯವನ್ನು ಹಸ್ತಾಂತರಿಸುವಂತೆ ಆದೇಶಿಸಿದೆ.





