ಕೊರೋನ ಲಸಿಕೆ ವಿತರಣೆಗೆ ಸಂಬಂಧಿಸಿ ಬೆದರಿಕೆಯಿದೆ: ಅದರ್ ಪೂನಾವಾಲಾ
"ಕೆಲವೇ ದಿನಗಳಲ್ಲಿ ಭಾರತಕ್ಕೆ ಮರಳುವೆ"

ಲಂಡನ್, ಮೇ 2: ನಾನು ಭಾರತಕ್ಕೆ ಕೆಲವೇ ದಿನಗಳಲ್ಲಿ ಮರಳಲಿದ್ದೇನೆ ಎಂದು ಲಸಿಕೆ ತಯಾರಿಕಾ ಕಂಪೆನಿ, ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದರ್ ಪೂನಾವಾಲಾ ಶನಿವಾರ ಹೇಳಿದ್ದಾರೆ.
ಕೋವಿಡ್-19 ಲಸಿಕೆಗಳ ವಿತರಣೆಗೆ ಸಂಬಂಧಿಸಿ ಬೆದರಿಕೆಗಳು ಬಂದ ಕಾರಣ ನಾನು ಭಾರತವನ್ನು ತೊರೆದೆ ಎಂಬುದಾಗಿ ಅವರು ಹೇಳುವ ಸಂದರ್ಶನ 'ದ ಟೈಮ್ಸ್ಪ' ತ್ರಿಕೆಯಲ್ಲಿ ಪ್ರಕಟಗೊಂಡ ಗಂಟೆಗಳ ಬಳಿಕ ಅವರು ಈ ನಿರ್ಧರವನ್ನು ಘೋಷಿಸಿದ್ದಾರೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಮತ್ತು ಔಷಧಿ ತಯಾರಿಕಾ ಕಂಪೆನಿ ಆಸ್ಟ್ರಝೆನೆಕ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೋನ ವೈರಸ್ ಲಸಿಕೆ ಕೋವಿಶೀಲ್ಡ್‌ನ್ನು ಭಾರತದಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯ ಉತ್ಪಾದಿಸುತ್ತಿದೆ.
ಭಾರತದಲ್ಲಿ ಕೋವಿಡ್-19 ಲಸಿಕೆಗಳಿಗಾಗಿನ ಬೇಡಿಕೆ ಅಗಾಧ ಪ್ರಮಾಣದಲ್ಲಿ ಏರುತ್ತಿರುವ ಹಿನ್ನೆಲೆಯಲ್ಲಿ, ಲಸಿಕೆಗಳನ್ನು ಪೂರೈಸುವುದಕ್ಕೆ ಸಂಬಂಧಿಸಿದ ಒತ್ತಡದಲ್ಲಿ ನಾನಿದ್ದೆ ಎಂದು ಬ್ರಿಟಿಶ್ ದೈನಿಕಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ. ನಾವು ನಮ್ಮ ಕೆಲಸವನ್ನು ಮಾಡುತ್ತೇವೆ. ಲಸಿಕೆ ಬೇಕೆಂದು ಯಾರ್ಯಾರೊ ಕೇಳುತ್ತಾರೆ. ಅವರ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗದಾಗ, ಅವರು ಏನು ಮಾಡಬಹುದು ಎಂಬ ಭೀತಿ ಎದುರಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಇರಲು ನಾನು ಬಯಸುವುದಿಲ್ಲ ಎಂದು ಅವರು ಹೇಳಿದರು.
ಬ್ರಿಟನ್‌ನಲ್ಲಿರುವ ಪಾಲುದಾರರು ಮತ್ತು ಕಂಪೆನಿಯಲ್ಲಿ ಹಿತಾಸಕ್ತಿ ಹೊಂದಿದವರೊಂದಿಗೆ ಸಭೆ ನಡೆಸಿದ ಬಳಿಕ, ಶನಿವಾರ ರಾತ್ರಿ ಪೂನಾವಾಲ ಟ್ವೀಟ್ ಮಾಡಿದ್ದು, ಈ ನಡುವೆ, ಪುಣೆಯಲ್ಲಿ ಕೋವಿಶೀಲ್ಡ್ ಉತ್ಪಾದನೆ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ ಎಂದು ತಿಳಿಸಲು ಸಂತೋಷವಾಗುತ್ತಿದೆ ಎಂಬುದಾಗಿ ಬರೆದಿದ್ದಾರೆ.
ಫೋನ್ ಕರೆಗಳು ತುಂಬಾ ಕೆಟ್ಟದು
ಕೋವಿಡ್-19 ಲಸಿಕೆಗಳಿಗಾಗಿ ಫೋನ್ ಕರೆಗಳನ್ನು ಮಾಡುವುದು ಅತ್ಯಂತ ಕೆಟ್ಟ ಸಂಗತಿಯಾಗಿದೆ ಎಂದು ಸಂದರ್ಶನದಲ್ಲಿ ಪೂನಾವಾಲಾ ಹೇಳಿದ್ದಾರೆ.
ಫೋನ್ ಸಂಭಾಷಣೆ ಸೌಹಾರ್ದಯುತವಾಗಿಯೇ ಆರಂಭವಾಗುತ್ತದೆ. ಆದರೆ, ಲಸಿಕೆಗಳಿಗಾಗಿನ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂಬುದಾಗಿ ನಾನು ವಿವರಿಸಿದಾಗ ಅದು ಬೇರೆಯೇ ದಿಕ್ಕಿಗೆ ಸಾಗುತ್ತದೆ ಎಂದು ಅವರು ಹೇಳಿದ್ದಾರೆ.
ಲಸಿಕೆ ಪೂರೈಕೆಯ ಬದ್ಧತೆಗಳನ್ನು ಈಡೇರಿಸಲು ಪರದಾಡುತ್ತಿರುವ ನಡುವೆಯೇ, ಬೇರೆ ದೇಶಗಳಲ್ಲಿ ಲಸಿಕೆಯ ಉತ್ಪಾದನೆ ಮಾಡಲು ನಾನು ಯೋಚಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ವೈ ಶ್ರೇಣಿ ಭದ್ರತೆ
ಅದರ್ ಪೂನಾವಾಲಾಗೆ ಭಾರತದಾದ್ಯಂತ ವೈ ಶ್ರೇಣಿಯ ಭದ್ರತೆ ನೀಡಲಾಗುವುದು ಎಂದು ಕೇಂದ್ರ ಸರಕಾರ ಎಪ್ರಿಲ್ 28ರಂದು ಘೋಷಿಸಿದೆ.
ಬೆದರಿಕೆಗಳ ಬಗ್ಗೆ ವಿವರವಾದ ಪರಿಶೀಲನೆ ನಡೆಸಿದ ಬಳಿಕ, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಇದಕ್ಕೆ ಸಂಬಧಿಸಿದ ಆದೇಶ ಹೊರಡಿಸಿದೆ.







