ಪಕ್ಷಾಂತರಿಗಳಿಗೆ ಪಾಠ ಕಲಿಸಿದ ಬಂಗಾಳ ಚುನಾವಣೆ

ಸಾಂದರ್ಭಿಕ ಚಿತ್ರ
ಕೊಲ್ಕತ್ತಾ, ಮೇ 3: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ನಿಷ್ಠೆ ಬದಲಿಸಿದ ಕಾರಣಕ್ಕಾಗಿ ಟಿಎಂಸಿಯ ಬಹಳಷ್ಟು ಮಂದಿ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಆದರೆ ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದ ಬಹುತೇಕ ಶಾಸಕರಿಗೆ ಇದು ತಿರುಗುಬಾಣವಾಗಿ ಪರಿಣಮಿಸಿದೆ. ಟಿಎಂಸಿ ತೊರೆದು ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸಿದ್ದ ಬಹುತೇಕ ಶಾಸಕರು ಸೋಲನುಭವಿಸಿದ್ದಾರೆ. ಆದರೆ ಸುವೇಂದು ಅಧಿಕಾರಿ ಮಾತ್ರ ತಮ್ಮ ಮಾಜಿ ನಾಯಕಿಗೆ ಸೋಲಿನ ರುಚಿ ತೋರಿಸುವ ಮೂಲಕ ಪ್ರಭಾವಿ ಎನಿಸಿಕೊಂಡಿದ್ದಾರೆ.
ಟಿಎಂಸಿಯಿಂದ ನಿಷ್ಠೆ ಬದಲಿಸಿದ ಪ್ರಮುಖರಲ್ಲಿ ದೀದಿ ಸಂಪುಟದಲ್ಲಿ ಸಚಿವರಾಗಿದ್ದ ರಜೀಬ್ ಬ್ಯಾನರ್ಜಿ, ಸಿಂಗೂರ್ನ ಮಾಜಿ ಶಾಸಕ ರಬೀಂದ್ರನಾಥ್ ಭಟ್ಟಾಚಾರ್ಯ, ನಟ ರುದ್ರಾನಿಲ್ ಘೋಷ್ ಮತ್ತು ಮಾಜಿ ಹೌರಾ ಮೇಯರ್ ರತಿನ್ ಚಕ್ರಬರ್ತಿ ಸೇರಿದ್ದಾರೆ.
ವರ್ಷಾರಂಭದಲ್ಲಿ ಬಿಜೆಪಿಗೆ ಸೇರಿದ್ದ ರಜೀಬ್ ಬ್ಯಾನರ್ಜಿ, ದೊಮ್ಜೂರ್ ಕ್ಷೇತ್ರದಿಂದ ಹ್ಯಾಟ್ರಿಕ್ ಸಾಧಿಸಲು ವಿಫಲರಾಗಿದ್ದು, ಟಿಎಂಸಿಯ ಕಲ್ಯಾಣ್ ಘೋಷ್ ವಿರುದ್ಧ 42,620 ಮತಗಳ ಅಂತರದಿಂದ ಹೀನಾಯವಾಗಿ ಸೋತಿದ್ದಾರೆ.
ಟಿಎಂಸಿ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಪಕ್ಷ ತೊರೆದಿದ್ದ ಭಟ್ಟಾಚಾರ್ಯ ಸಿಂಗೂರ್ನಲ್ಲಿ ಬೆಚರಾಂ ಮನ್ನಾ ವಿರುದ್ಧ 26 ಸಾವಿರ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಹಿಂದೆ ಆಯ್ಕೆಯಾಗಿದ್ದ ಸ್ಥಾನದಿಂದ ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸಿದ್ದ ಘೋಷ್ ಕೂಡಾ ಮುಖಭಂಗ ಅನುಭವಿಸಿದ್ದಾರೆ. ಸಚಿವ ಶೋಭನ್ದೇವ್ ಚಟ್ಟೋಪಾಧ್ಯಾಯ ಅವರು ಭಬಾನಿಪುರ ಕ್ಷೇತ್ರದಲ್ಲಿ ರುದ್ರಾನಿಲ್ ಘೋಷ್ ವಿರುದ್ಧ 28 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ.
ಟಿಎಂಸಿ ಆಡಳಿತವಿದ್ದ ಹೌರಾ ಮಹಾನಗರ ಪಾಲಿಕೆ ಮೇಯರ್ ಆಗಿದ್ದ ಚಕ್ರಬರ್ತಿ ಬಿಜೆಪಿಗೆ ಪಕ್ಷಾಂತರಗೊಂಡು ಶಿಬಪುರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ ಅವರು ಮಾಜಿ ಕ್ರಿಕೆಟರ್ ಮನೋಜ್ ತಿವಾರಿ ಕೈಯಲ್ಲಿ 32 ಸಾವಿರ ಮತಗಳ ಭಾರಿ ಅಂತರದ ಸೋಲು ಕಂಡಿದ್ದಾರೆ.
ಬಿಜೆಪಿಗೆ ಪಕ್ಷಾಂತರಗೊಂಡ ಮತ್ತೊಬ್ಬ ಟಿಎಂಸಿ ಶಾಸಕ ಜಿತೇಂದ್ರ ತಿವಾರಿ, ಟಿಎಂಸಿಯ ನರೇಂದ್ರನಾಥ್ ಚಕ್ರಬರ್ತಿ ವಿರುದ್ಧ ಸೋಲು ಅನುಭವಿಸಿದ್ದಾರೆ. ಪಕ್ಷದಿಂದ ಉಚ್ಚಾಟನೆಗೊಂಡು ಬಿಜೆಪಿ ಸೇರಿದ್ದ ದಾಲ್ಮಿಯಾ, ಬಲ್ಲಿ ಕ್ಷೇತ್ರದಲ್ಲಿ ರಾಣಾ ಚಟರ್ಜಿ ವಿರುದ್ಧ ಪರಾಭವಗೊಂಡಿದ್ದಾರೆ.
ಪಕ್ಷ ಬದಲಿಸಿ ಉತ್ತರಪಾರಾ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದ ಪ್ರಬೀರ್ ಕುಮಾರ್ ಘೋಸಲ್ 35 ಸಾವಿರ ಮತಗಳ ಅಗಾಧ ಅಂತರದ ಸೋಲು ಅನುಭವಿಸಿದ್ದಾರೆ. ಹಿಂದೆ ಟಿಎಂಸಿ ಶಾಸಕರಾಗಿದ್ದ ಇವರು ಕಾಂಚನ್ ಮಲಿಕ್ ವಿರುದ್ಧ ಪರಾಭವಗೊಂಡಿದ್ದಾರೆ. ಬಿಜೆಪಿ ಟಿಕೆಟ್ನಿಂದ ಸ್ಪರ್ಧಿಸಿದ್ದ ಟಿಎಂಸಿ ಶಾಸಕ ಸಿಲಭದ್ರ ದತ್ತಾ ಖರ್ದ್ ಕ್ಷೇತ್ರದಲ್ಲಿ ಪರಾಭವಗೊಂಡಿದ್ದಾರೆ.