ಲಸಿಕೆಗೆ 'ಆರ್ಡರ್' ಇಲ್ಲದೇ ಇದ್ದುದರಿಂದ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿರಲಿಲ್ಲ: ಅದಾರ್ ಪೂನಾವಾಲ
"ಕೋವಿಡ್ ಲಸಿಕೆ ಪೂರೈಕೆ ಕೊರತೆ ಜುಲೈವರೆಗೆ ಇರಲಿದೆ"

ಅದಾರ್ ಪೂನಾವಾಲ
ಮುಂಬೈ: ಭಾರತದಲ್ಲಿ ಕೋವಿಡ್ ಲಸಿಕೆಗಳ ಕೊರತೆ ಜುಲೈ ತನಕ ಮುಂದುವರಿಯಬಹುದು ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲ ಹೇಳಿದ್ದಾರೆ. ಜುಲೈ ತಿಂಗಳ ಹೊತ್ತಿಗೆ ಕೋವಿಡ್ ಲಸಿಕೆಗಳ ಉತ್ಪಾದನೆ ಈಗಿನ 6ರಿಂದ 7 ಕೋಟಿಯಿಂದ 10 ಕೋಟಿ ತನಕ ಹೆಚ್ಚಾಗಬಹುದು ಎಂದು ಅವರು ಹೇಳಿದ್ದಾರೆ ಎಂದು Financial Express ವರದಿ ಮಾಡಿದೆ.
ಲಸಿಕೆಗಳ ಕೊರತೆ ಕುರಿತಂತೆ ರಾಜಕಾರಣಿಗಳು ಹಾಗೂ ಟೀಕಾಕಾರರು ತಮ್ಮ ಕಂಪೆನಿಯ ಮಾನಹಾನಿಗೈಯ್ಯುತ್ತಿದ್ದಾರೆ ಎಂದು ಅವರು ಆರೋಪಿಸಿದರು. "ಆರ್ಡರ್''ಗಳು ಇಲ್ಲದೇ ಇದ್ದುದರಿಂದ ಲಸಿಕೆ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿರಲಿಲ್ಲ, ವರ್ಷಕ್ಕೆ 100 ಕೋಟಿಗಿಂತ ಅಧಿಕ ಲಸಿಕೆ ಬೇಕೆಂದು ತಾವು ಅಂದುಕೊಂಡಿರಲಿಲ್ಲ ಎಂದು ಹೇಳಿದ ಅವರು ತಮ್ಮನ್ನು ಅನಗತ್ಯವಾಗಿ ಹಾಗೂ ಅನ್ಯಾಯವಾಗಿ ಬಲಿಪಶು ಮಾಡಲಾಗಿದೆ ಎಂದು ದೂರಿದ್ದಾರೆ.
ಲಸಿಕೆ ಪೂರೈಕೆ ಸಂಬಂಧಿಸಿದಂತೆ ಬೆದರಿಕೆಗಳಿಂದಾಗಿ ತಾವು ದೇಶ ಬಿಟ್ಟಿ ಲಂಡನ್ಗೆ ತೆರಳಿದ್ದಾಗಿ ಕಳೆದ ವಾರ ಹೇಳಿದ್ದ ಪೂನಾವಾಲ ಇದೀಗ ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ಸುರಕ್ಷತೆ ಕುರಿತ ಭಯದಿಂದ ಲಂಡನ್ಗೆ ಬಂದಿಲ್ಲ, ಉದ್ಯಮ ಸಂಬಂಧಿ ಕೆಲಸಕ್ಕಾಗಿ ಬಂದಿದ್ದಾಗಿ ಹೇಳಿದ್ದಾರೆ.