'ಅನಗತ್ಯ' ಆಕ್ಸಿಜನ್ ಪೂರೈಕೆ ಎಂದು ಯುವ ಕಾಂಗ್ರೆಸ್ ಅನ್ನು ಕುಟುಕಿ ಪೇಚಿಗೀಡಾದ ಜೈಶಂಕರ್

ಎಸ್ ಜೈಶಂಕರ್ (PTI)
ಹೊಸದಿಲ್ಲಿ: ಅಗ್ಗದ ಪ್ರಚಾರಕ್ಕಾಗಿ ಫಿಲಿಪ್ಪೀನ್ಸ್ ದೂತಾವಾಸಕ್ಕೆ ಆಕ್ಸಿಜನ್ ಸಿಲಿಂಡರ್ಗಳನ್ನು ನೀಡಿದೆ ಎಂದು ಯುವ ಕಾಂಗ್ರೆಸ್ ಘಟಕದ ವಿರುದ್ಧ ಕೇಂದ್ರ ವಿದೇಶಾಂಗ ಇಲಾಖೆ ಆರೋಪ ಹೊರಿಸಿ ಇದೀಗ ಪೇಚಿಗೀಡಾಗಿದೆ. ಕೇಂದ್ರದ ಆರೋಪದ ಬೆನ್ನಲ್ಲೇ ನ್ಯೂಝಿಲೆಂಡ್ ಹೈಕಮಿಷನ್ ಕೂಡ ಯುವ ಕಾಂಗ್ರೆಸ್ನಿಂದ ಸಾರ್ವಜನಿಕವಾಗಿ ಆಕ್ಸಿಜನ್ಗೆ ಕೋರಿಕೆ ಸಲ್ಲಿಸಿರುವುದೇ ಸರಕಾರದ ಮುಜುಗರಕ್ಕೆ ಕಾರಣವಾಗಿದೆ ಎಂದು telegraphindia.com ವರದಿ ಮಾಡಿದೆ.
"ವಿದೇಶಾಂಗ ವ್ಯವಹಾರಗಳ ಸಚಿವಾಲಯ ಫಿಲಿಪ್ಪೀನ್ಸ್ ದೂತಾವಾಸದ ಜತೆ ಮಾತನಾಡಿದೆ. ಅಲ್ಲಿ ಯಾವುದೇ ಕೋವಿಡ್ ಪ್ರಕರಣಗಳಿಲ್ಲದೇ ಇರುವುದರಿಂದ ಅನಗತ್ಯ ಪೂರೈಕೆ ಮಾಡಲಾಗಿದೆ. ಸ್ಪಷ್ಟವಾಗಿ ಅಗ್ಗದ ಪ್ರಚಾರಕ್ಕಾಗಿ. ಜನರು ಆಕ್ಸಿಜನ್ಗಾಗಿ ಅಲೆದಾಡುತ್ತಿರುವಾಗ ಈ ರೀತಿ ಸಿಲಿಂಡರ್ ಗಳನ್ನು ನೀಡುತ್ತಿರುವುದು ಆಘಾತಕಾರಿ,'' ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಟ್ವೀಟ್ ಮಾಡಿದ್ದರು.
ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಸರಕಾರವನ್ನು ಟೀಕಿಸಿ, ವಿದೇಶಾಂಗ ಸಚಿವಾಲಯ ನಿದ್ದೆಯಲ್ಲಿದೆಯೇ ಎಂದು ಮಾಡಿದ್ದ ಟ್ವೀಟ್ಗೆ ಜೈಶಂಕರ್ ಪ್ರತಿಕ್ರಿಯಿಸಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಯಾವತ್ತೂ ಮಲಗುವುದಿಲ್ಲ, ಜಗತ್ತಿನಾದ್ಯಂತ ನಮ್ಮ ಜನರಿಗೆ ಇದು ತಿಳಿದಿದೆ. ನಾವು ನಕಲಿ ವಿಚಾರಗಳನ್ನೂ ಹೇಳಿಕೊಳ್ಳುವುದಿಲ್ಲ, ಯಾರು ಹಾಗೆ ಮಾಡುತ್ತಾರೆಂಬುದು ತಿಳಿದಿದೆ,'' ಎಂದಿದ್ದಾರೆ.
ಜೈಶಂಕರ್ ಅವರ ಟ್ವೀಟ್ ಬೆಳಿಗ್ಗೆ 9.14ಕ್ಕೆ ಬಂದಿದ್ದರೆ, ಆಕ್ಸಿಜನ್ ಸಿಲಿಂಡರ್ ಕೋರಿ ಯುವ ಕಾಂಗ್ರೆಸ್ಗೆ ನ್ಯೂಝಿಲೆಂಡ್ ಹೈಕಮಿಷನ್ 9.15ಕ್ಕೆ ಅಪೀಲು ಸಲ್ಲಿಸಿತ್ತು.
ಈ ಟ್ವೀಟ್ ನಂತರ ಡಿಲೀಟ್ ಮಾಡಿ 10.07ಕ್ಕೆ ಇನ್ನೊಂದು ಟ್ವೀಟ್ ಮಾಡಿ "ನಾವು ಎಲ್ಲಾ ಮೂಲಗಳಿಂದಲೂ ತುರ್ತಾಗಿ ಆಕ್ಸಿಜನ್ ಪಡೆಯಲು ಯತ್ನಿಸುತ್ತಿದ್ದೇವೆ ಆದರೆ ನಮ್ಮ ಅಪೀಲನ್ನು ದುರದೃಷ್ಟವಶಾತ್ ತಪ್ಪಾಗಿ ಅರ್ಥೈಸಲಾಗಿದೆ,'' ಎಂದು ಹೇಳಿದೆ.
ನಂತರ ಯುವ ಕಾಂಗ್ರೆಸ್ ಅಧ್ಯಕ್ಷರು ತಮ್ಮ ತಂಡ ರಾಯಭಾರ ಕಚೇರಿಗೆ ಸಿಲಿಂಡರ್ ಪೂರೈಕೆ ಮಾಡುವ ವೀಡಿಯೋ ಟ್ವೀಟ್ ಮಾಡಿದ್ದಾರೆ.
ರಾಯಭಾರ ಕಚೇರಿಗಳ ವೈದ್ಯಕೀಯ ಅಗತ್ಯತೆಗಳಿಗೆ ಸಚಿವಾಲಯ ಸ್ಪಂದಿಸುತ್ತಿದೆ ಎಂದೂ ಸಚಿವಾಲಯ ನಂತರ ಟ್ವೀಟ್ ಮಾಡಿದೆ. ರಾಯಭಾರ ಕಚೇರಿಗಳ ಹಲವು ಅಧಿಕಾರಿಗಳು ಕೋವಿಡ್ ಸೋಂಕಿಗೊಳಗಾಗಿದ್ದಾರೆನ್ನಲಾಗಿದೆ.
ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಹಾಗೂ ಭಾರತೀಯ ಯುವ ಕಾಂಗ್ರೆಸ್ನ ಟ್ವಿಟರ್ ಹ್ಯಾಂಡಲ್ಗಳಿಗೆ ಹಲವರು ಸಹಾಯ ಕೋರಿ ಸಂದೇಶ ಕಳುಹಿಸುತ್ತಾರಾದರೂ ರಾಯಭಾರ ಕಚೇರಿಗಳೂ ಸರಕಾರವನ್ನು ಸಂಪರ್ಕಿಸದೆ ವಿಪಕ್ಷವನ್ನು ಸಂಪರ್ಕಿಸಿರುವುದು ಜೈಶಂಕರ್ ಅವರಿಗೆ ಇರಿಸುಮುರಿಸು ತಂದಿತ್ತು ಎನ್ನಲಾಗಿದೆ.
ಇತ್ತ ಯುವ ಕಾಂಗ್ರೆಸ್ ಕೂಡ ಜೈಶಂಕರ್ ಟ್ವೀಟ್ಗೆ ಪ್ರತಿಕ್ರಿಯಿಸಿ "ವಿಳಂಬದ ಉತ್ತರಕ್ಕಾಗಿ ಕ್ಷಮೆಯಿರಲಿ, ವಾಸ್ತವವಾಗಿ ನಾವು ನ್ಯೂಝಿಲೆಂಡ್ ದೂತಾವಾಸದ ಮನವಿ ಪೂರೈಸುವ ಕೆಲಸದಲ್ಲಿ ವ್ಯಸ್ತರಾಗಿದ್ದೆವು. ಫಿಲಿಪ್ಪೀನ್ಸ್ ದೂತಾವಾಸದಲ್ಲೂ ಇಬ್ಬರು ಕೋವಿಡ್ ರೋಗಿಗಳಿಗೆ ತುರ್ತು ಆಕ್ಸಿಜನ್ ಅಗತ್ಯವಿದೆಯೆಂದು ಹೇಳಲಾಗಿದ್ದರಿಂದ ನಾವು ಅಲ್ಲಿಗೆ ಕಳುಹಿಸಿದ್ದೆವು. ನಂತರ ನಮಗೆ ಫೇಸ್ ಬುಕ್ನಲ್ಲಿ ಧನ್ಯವಾದ ಹೇಳಿದ್ದರು. ಹೆಸರು ಮತ್ತು ಸಂಖ್ಯೆಗಳನ್ನು ಮರೆಮಾಚಿ ಎಲ್ಲಾ ಸ್ಕ್ರೀನ್ ಶಾಟ್ಗಳನ್ನು ಅಟ್ಯಾಚ್ ಮಾಡಲಾಗಿದೆ,'' ಎಂದು ಹೇಳಿದೆ.
MEA checked with the Philippines Embassy. This was an unsolicited supply as they had no Covid cases. Clearly for cheap publicity by you know who. Giving away cylinders like this when there are people in desperate need of oxygen is simply appalling. @Jairam_Ramesh https://t.co/G3jPE3c0nR
— Dr. S. Jaishankar (@DrSJaishankar) May 2, 2021
We are trying all sources to arrange for oxygen cylinders urgently and our appeal has unfortunately been misinterpreted, for which we are sorry.
— NZ in India (@NZinIndia) May 2, 2021
आज #SOSIYC के सदस्यों ने अंतरराष्ट्रीय समुदाय के लोगों की मदद की, फिलीपींस दूतावास को ऑक्सीजन सिलेंडर पहुँचाया ।
— SOSIYC (@sosiyc) May 1, 2021
आओ मिलकर जीवन बचाएं । pic.twitter.com/glFB1umLoP