ನಂದಿಗ್ರಾಮ ಕ್ಷೇತ್ರದ ಚುನಾವಣಾ ಅಧಿಕಾರಿಗೆ ಪ್ರಾಣ ಬೆದರಿಕೆ ಇತ್ತು: ಮಮತಾ ಬ್ಯಾನರ್ಜಿ ಆರೋಪ

ಕೋಲ್ಕತಾ: ಪಶ್ಚಿಮ ಬಂಗಾಳವನ್ನು ಗೆದ್ದಿದ್ದರೂ, ತನ್ನ ಮಾಜಿ ಆಪ್ತ, ಬಿಜೆಪಿ ಪ್ರತಿಸ್ಪರ್ಧಿ ಸುವೇಂದು ಅಧಿಕಾರಿ ವಿರುದ್ಧ ನಂದಿಗ್ರಾಮ ಕ್ಷೇತ್ರದಲ್ಲಿ ಸೋತಿರುವ ಮಮತಾ ಬ್ಯಾನರ್ಜಿ, ಈ ಕ್ಷೇತ್ರದಲ್ಲಿ ಮತ ಎಣಿಕೆಯ ಮೇಲ್ವಿಚಾರಣೆಯನ್ನು ನೋಡಿಕೊಂಡಿದ್ದ ಚುನಾವಣಾ ಅಧಿಕಾರಿಗೆ ಬೆದರಿಕೆ ಇತ್ತು ಎಂದು ಸೋಮವಾರ ಆರೋಪಿಸಿದ್ದಾರೆ.
‘ನಾನೇನಾದರೂ ಮರು ಎಣಿಕೆಗೆ ಮುಂದಾಗಿದ್ದರೆ ನನ್ನ ಪ್ರಾಣಕ್ಕೆ ಅಪಾಯವಿತ್ತು’ ಎಂದು ನಂದಿಗ್ರಾಮದ ರಿಟರ್ನಿಂಗ್ ಅಧಿಕಾರಿಯೊಬ್ಬರು ಬೇರೊಬ್ಬರ ಬಳಿ ಬಾಯಿ ಬಿಟ್ಟಿದ್ದಾರೆ. ಈ ಬಗ್ಗೆ ನಾನು ಒಬ್ಬರಿಂದ ಎಸ್ ಎಂಎಸ್ ಸ್ವೀಕರಿಸಿದ್ದೇನೆ. ಅದರಲ್ಲಿ ಚುನಾವಣಾ ಅಧಿಕಾರಿಯು ನಾನು ಮರು ಮತ ಎಣಿಕೆಗೆ ಆದೇಶಿಸಲಾರೆ. ಇದರಿಂದ ನನ್ನ ಕುಟುಂಬ ಹಾಳಾಗುತ್ತದೆ. ನನಗೆ ಪುಟ್ಟ ಮಗಳಿದ್ದಾಳೆ ಎಂದು ಬೇರೊಬ್ಬರಿಗೆ ಬರೆದಿದ್ದಾರೆ. ಇನ್ನು ಮತ ಎಣಿಕೆ ಸಮಯದಲ್ಲಿ 4 ಗಂಟೆಗಳ ಕಾಲ ಸರ್ವರ್ ಬಂದ್ ಆಗಿತ್ತು. ಇವೆಲ್ಲಾ ಸಂಗತಿಗಳಿಂದ ಮತ ಎಣಿಕೆ ವೇಳೆ ಅಕ್ರಮ ನಡೆದಿರುವುದು ಸ್ಪಷ್ಟ ಎಂದು ದೀದಿ ಆರೋಪಿಸಿದರು.
ರಾಜ್ಯಪಾಲರು ನನಗೆ ಸಂಜೆ ಅಭಿನಂದನೆ ಸಲ್ಲಿಸಿದ್ದರು. ಇದ್ದಕ್ಕಿದ್ದಂತೆ ಎಲ್ಲವೂ ಬದಲಾಯಿತು ಎಂದು ಬ್ಯಾನರ್ಜಿ ಹೇಳಿದ್ದಾರೆ.
ಬ್ಯಾನರ್ಜಿ ನಂದಿಗ್ರಾಮ ಚುನಾವಣೆಯಲ್ಲಿ ಸುವೇಂದು ಅಧಿಕಾರಿಯ ವಿರುದ್ಧ 1,700 ಮತಗಳಿಂದ ಸೋತಿದ್ದರು. ಮಧ್ಯರಾತ್ರಿಯವರೆಗೆ ಮತ ಎಣಿಕೆ ಸಾಗಿತ್ತು.