ಭಾರತದ ಕೋವಿಡ್ ಸಾವುಗಳನ್ನು ಅಣಕಿಸಿದ ಚೀನಾ: ವಿವಾದದ ಬಳಿಕ ಸಂದೇಶ ಡಿಲೀಟ್

ಬೀಜಿಂಗ್ (ಚೀನಾ), ಮೇ 3: ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಹಾರಿದ ಚೀನಾದ ಬಾಹ್ಯಾಕಾಶ ನಿಲ್ದಾಣದ ಒಂದು ಭಾಗ ಮತ್ತು ಭಾರತದಲ್ಲಿ ಉರಿಯುತ್ತಿರುವ ಚಿತೆಗಳ ಚಿತ್ರಗಳನ್ನು ಅಕ್ಕಪಕ್ಕದಲ್ಲಿ ತೋರಿಸುವ ಸಂದೇಶವೊಂದನ್ನು ಚೀನಾದ ಕಾನೂನು ಅನುಷ್ಠಾನ ಸಂಸ್ಥೆಯೊಂದು ಸಾಮಾಜಿಕ ಜಾಲತಾಣವೊಂದರಲ್ಲಿ ಹಾಕಿದ್ದು ವಿವಾದಕ್ಕೆ ಕಾರಣವಾಗಿದೆ.
ಈ ಸಂದೇಶಕ್ಕೆ ಆನ್‌ಲೈನ್‌ನಲ್ಲಿ ಭಾರೀ ಟೀಕೆ ವ್ಯಕ್ತವಾದ ಬಳಿಕ ಅದನ್ನು ಈಗ ಅಳಿಸಿ ಹಾಕಲಾಗಿದೆ.
ಟಿಯಾನ್‌ಹೆ ಬಾಹ್ಯಾಕಾಶ ನಿಲ್ದಾಣದ ಮೋಡ್ಯೂಲೊಂದರ ಉಡಾವಣಾ ಚಿತ್ರಗಳು ಮತ್ತು ಉಡಾವಣೆಯ ವೇಳೆ ಅದು ಬೆಂಕಿಯುಗುಳುತ್ತಿರುವ ಚಿತ್ರಗಳನ್ನು ಭಾರತದಲ್ಲಿ ಈಗ ನಡೆಯುತ್ತಿರುವ ಸಾಮೂಹಿಕ ಹೊರಾಂಗಣ ಶವಸಂಸ್ಕಾರದ ಚಿತ್ರಗಳೊಂದಿಗೆ ಹೋಲಿಸಲಾಗಿತ್ತು. ಚೀನಾವೂ ಬೆಂಕಿಯನ್ನು ಹೊತ್ತಿಸುತ್ತಿದೆ ಹಾಗೂ ಭಾರತವೂ ಬೆಂಕಿಯನ್ನು ಹೊತ್ತಿಸುತ್ತಿದೆ ಎಂಬ ವಿವರಣೆಯನ್ನು ಅದಕ್ಕೆ ಕೊಡಲಾಗಿತ್ತು.
ಚೀನಾ ಕಮ್ಯುನಿಸ್ಟ್ ಪಕ್ಷದ ಸೆಂಟ್ರಲ್ ಪೊಲಿಟಿಕಲ್ ಆ್ಯಂಡ್ ಲೀಗಲ್ ಅಫೇರ್ಸ್ ಕಮಿಶನ್ ತನ್ನ ಅಧಿಕೃತ ಸೈನಾ ವೈಬೊ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ಸಂದೇವನ್ನು ಶನಿವಾರ ಹಾಕಿತ್ತು. ಅದರ ಜೊತೆಗೇ, ಭಾರತದಲ್ಲಿ ಈಗ ಹೊಸ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ದಿನಕ್ಕೆ 4 ಲಕ್ಷವನ್ನೂ ದಾಟಿದೆ ಎಂಬ ಹ್ಯಾಶ್‌ಟ್ಯಾಗೊಂದನ್ನು ಬರೆಯಲಾಗಿತ್ತು.
ಈ ಸಂದೇಶದ ಬರ್ಬರತೆಗೆ ಚೀನೀ ಸಾಮಾಜಿಕ ಮಾಧ್ಯಮ ಬಳಕೆದಾರರು ಆಘಾತ ವ್ಯಕ್ತಪಡಿಸಿದ ಬಳಿಕ, ಅದೇ ದಿನ ರಾತ್ರಿ ಅದನ್ನು ಅಳಿಸಿ ಹಾಕಲಾಗಿದೆ.







