ಜಮ್ಮು-ಕಾಶ್ಮೀರ:‘ದೇಶವಿರೋಧಿ’ ಸರಕಾರಿ ಉದ್ಯೋಗಿಗಳ ವಜಾ ಪ್ರಕ್ರಿಯೆ ಆರಂಭ

ಹೊಸದಿಲ್ಲಿ,ಮೇ 3: ಒಂಭತ್ತು ತಿಂಗಳುಗಳ ಹಿಂದೆ ಸರಕಾರಿ ಉದ್ಯೋಗಗಳಿಗೆ ಸಂಬಂಧಿಸಿದ ಕಾನೂನುಗಳು ಮತ್ತು ನಿಯಮಗಳಿಗೆ ಕೆಲವು ತಿದ್ದುಪಡಿಗಳನ್ನು ತಂದಿದ್ದ ಜಮ್ಮು-ಕಾಶ್ಮೀರದ ಉಪರಾಜ್ಯಪಾಲ ಮನೋಜ ಸಿನ್ಹಾ ಅವರ ಸರಕಾರವು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿರುವ ಸರಕಾರಿ ಉದ್ಯೋಗಿಗಳನ್ನು ಸೇವೆಯಿಂದ ವಜಾಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ.
2020,ಜುಲೈ 30ರಂದು ಸೇವಾ ನಿಯಮಗಳಿಗೆ ತಿದ್ದುಪಡಿಗಳನ್ನು ತಂದಿದ್ದ ಆಡಳಿತವು ರಾಜ್ಯದ ಭದ್ರತೆಗೆ ಬೆದರಿಕೆಯಾಗಿ ಪರಿಣಮಿಸುವ ಉದ್ಯೋಗಿಗಳನ್ನು ವಜಾಗೊಳಿಸಲು ವಿಚಾರಣೆಯ ಅಗತ್ಯವನ್ನು ಕೈಬಿಟ್ಟಿತ್ತು. ಸರಕಾರವು ಮೊದಲ ಬಾರಿಗೆ ಯಾವುದೇ ನ್ಯಾಯಾಂಗ ಪರಿಶೀಲನೆಯನ್ನು ಎದುರಿಸದೆ ‘ದೇಶವಿರೋಧಿ ಉದ್ಯೋಗಿಗಳನ್ನು ’ವಜಾಗೊಳಿಸಲು ಕಾರ್ಯತಂತ್ರವನ್ನು ರೂಪಿಸಿತ್ತು.
ರಾಜ್ಯದ ಭದ್ರತೆಗೆ ಬೆದರಿಕೆಯಾಗಿದ್ದಾರೆ ಎಂದು ಸರಕಾರಕ್ಕೆ ವರದಿ ಮಾಡಲಾದ ಉದ್ಯೋಗಿಗಳ ಹಣೆಬರಹವನ್ನು ನಿರ್ಧರಿಸುವ ಸಂಪೂರ್ಣ ಅಧಿಕಾರವನ್ನು ಗೃಹಖಾತೆಯ ಪ್ರಧಾನ ಕಾರ್ಯದರ್ಶಿ ಮತ್ತು ಹೆಚ್ಚುವರಿ ಡಿಜಿಪಿ(ಸಿಐಡಿ) ಅವರಿಗೆ ನೀಡಲಾಗಿದೆ.
ಸಾಮಾನ್ಯ ಆಡಳಿತ ಇಲಾಖೆಯು ಉಪರಾಜ್ಯಪಾಲರ ಅನುಮತಿಯೊಂದಿಗೆ ಕುಪ್ವಾರಾ ಜಿಲ್ಲೆಯ ಕ್ರಾಲಪೋರಾದ ಸರಕಾರಿ ಮಿಡ್ಲ್ ಸ್ಕೂಲ್‌ನ ಶಿಕ್ಷಕ ಇದ್ರೀಸ್ ಜಾನ್ ಅವರನ್ನು ದೇಶವಿರೋಧಿ ಚಟುವಟಿಕೆಗಳ ಆರೋಪದಲ್ಲಿ ಸೇವೆಯಿಂದ ವಜಾಗೊಳಿಸಿ ಶುಕ್ರವಾರ ಆದೇಶವನ್ನು ಹೊರಡಿಸಿದೆ.







