ಪಶ್ಚಿಮ ಬಂಗಾಳದ ಎರಡು ಕ್ಷೇತ್ರಗಳ ಮತದಾನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ಹೊಸದಿಲ್ಲಿ: ಕೊರೋನ ವೈರಸ್ ಉಲ್ಬಣದಿಂದಾಗಿ ಇಬ್ಬರು ಅಭ್ಯರ್ಥಿಗಳು ಸಾವನ್ನಪ್ಪಿದ್ದರಿಂದ ಮುಂದೂಡಲಾಗಿದ್ದ ಪಶ್ಚಿಮ ಬಂಗಾಳದ ಎರಡು ಕ್ಷೇತ್ರಗಳಲ್ಲಿನ ಮತದಾನವನ್ನು ಇದೀಗ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಚುನಾವಣಾ ಆಯೋಗ ಸೋಮವಾರ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಪಶ್ಚಿಮ ಬಂಗಾಳದ ಸಿಇಒ ಮತ್ತು ಒಡಿಶಾದ ಸಿಇಒ ಅವರಿಂದ ಎಲ್ಲಾ ವಾಸ್ತವ ಸಂಗತಿಗಳು ಮತ್ತು ಆಂತರಿಕ ವಿಚಾರವನ್ನು ಪರಿಗಣಿಸಿ ಮತ್ತು ಎನ್‌ಡಿಎಂಎ / ಎಸ್‌ಡಿಎಂಎ ಹೊರಡಿಸಿದ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಡಿಯಲ್ಲಿ ಲಾಕ್‌ಡೌನ್ ಅನ್ನು ಗಮನಿಸಿದ ನಂತರ ಆಯೋಗವು ಒಡಿಶಾದ ಪಿಪ್ಲಿ ಮತ್ತು ಪಶ್ಚಿಮ ಬಂಗಾಳದ ಜಂಗೀಪುರ ಹಾಗೂ ಸಂಸರ್‌ಗಂಜ್ ವಿಧಾನಸಭಾ ಕ್ಷೇತ್ರಗಳಲ್ಲಿನ ಚುನಾವಣೆಯನ್ನು ಮುಂದೂಡಲು ಹಾಗೂ ಅವಧಿಯನ್ನು ವಿಸ್ತರಿಸಲು ನಿರ್ಧರಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಎಪ್ರಿಲ್ ನಲ್ಲಿ ಕ್ರಾಂತಿಕಾರಿ ಸಮಾಜವಾದಿ ಪಕ್ಷದ ಜಂಗೀಪುರ ಅಭ್ಯರ್ಥಿ ಪ್ರದೀಪ್ ನಂದಿ ಹಾಗೂ ಸಂಸರ್‌ಗಂಜ್ ನ ಕಾಂಗ್ರೆಸ್ಸಿನ ಅಭ್ಯರ್ಥಿ ರೆಝಾವುಲ್ ಹಕ್ ಅವರು ಕೋವಿಡ್ ಸಮಸ್ಯೆಗಳಿಂದ ಸಾವನ್ನಪ್ಪಿದ್ದರು. ಚುನಾವಣಾ ನಿಯಮಗಳ ಪ್ರಕಾರ, ಈ ಎರಡು ಕ್ಷೇತ್ರಗಳಲ್ಲಿ ಮತದಾನವನ್ನು ಮೇ 16 ಕ್ಕೆ ಮುಂದೂಡಲಾಗಿತ್ತು..