ಚಾಮರಾಜನಗರ ಘಟನೆ ಸರಕಾರಿ ಪ್ರಾಯೋಜಿತ ಕೊಲೆ : ಪಿಎಫ್‌ಐ ಆರೋಪ
ಮಂಗಳೂರು, ಮೇ 3: ಚಾಮರಾಜನಗರದಲ್ಲಿ ನಡೆದ ಕೋವಿಡ್ ಸಾವುಗಳು ಸರಕಾರಿ ಪ್ರಾಯೋಜಿತ ಕೊಲೆಯಾಗಿದೆ ಎಂದು ಪಿಎಫ್‌ಐ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ 2ನೇ ಅಲೆಯು ಅನಾಹುತಕಾರಿಯಾಗಿ ಪಸರಿಸುತ್ತಿದೆ. ಈ ಮಧ್ಯೆ ಆಮ್ಲಜನಕ, ಹಾಸಿಗೆ, ವೆಂಟಿಲೇಟರ್ ಕೊರತೆ ಯಿಂದಾಗಿ ಜನರು ರೋಧಿಸುತ್ತಿರುವ ದೃಶ್ಯಗಳು ಕೇಳಿಬರುತ್ತಿವೆ. ಸಾವಿನ ಸರಣಿಗಳು ದಿನಪ್ರಂತಿ ಹೆಚ್ಚುತ್ತಾ ಹೋಗುತ್ತಿವೆ. ಆದರೂ ಸರಕಾರ ಕೋವಿಡ್ ನಿರ್ವಹಣೆಗೆ ಸಂಬಂಧಿಸಿ ಇನ್ನೂ ಎಚ್ಚೆತ್ತುಕೊಂಡಿಲ್ಲ. ಆರೋಗ್ಯ ಸಚಿವ ಡಾ.ಸುಧಾಕರ್ ರಾಜ್ಯದಲ್ಲಿ ಆಮ್ಲಜನಕದ ಕೊರತೆ ಇಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವಾಗಲೇ ಚಾಮರಾಜನಗರದಲ್ಲಿ ನಡೆದ ದಾರುಣ ಘಟನೆಯು ಆಡಳಿತ ವ್ಯವಸ್ಥೆಯ ನಿಷ್ಕ್ರಿಯತೆ ಯನ್ನು ಜನರ ಮುಂದೆ ತೆರೆದಿಟ್ಟಿದೆ ಎಂದಿದ್ದಾರೆ.
ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ಇಲ್ಲದೆ ಕಳೆದ 24 ಗಂಟೆಗಳಲ್ಲಿ 23 ಕೋವಿಡ್ ಸಾವಿನ ಪ್ರಕರಣಗಳು ದಾಖಲಾಗಿವೆ. ಈ ನಡುವೆ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆ ಇದೆ, ಪರಿಸ್ಥಿತಿ ಹೀಗೆ ಮುಂದುವರಿದರೆ ಸಾವು-ನೋವು ಸಂಭವಿಸಬಹುದು ಎಂದು ಮಾಜಿ ಸಂಸದರೊಬ್ಬರು ಸರಕಾರವನ್ನು ಎಚ್ಚರಿಸಿದ್ದರು.
ಸಮಸ್ಯೆಯನ್ನು ಸರಕಾರದ ಗಮನಕ್ಕೆ ತರಲಾಗಿದೆ, ಸಮರ್ಪಕ ಆಮ್ಲಜನಕ ಪೂರೈಕೆಗೆ ಸಂಬಂಧಿಸಿ ಸರಕಾರದಿಂದ ಸಕಾಲಿಕ ಸ್ಪಂದನೆ ಸಿಗುತ್ತಿಲ್ಲ ಎಂದು ಸ್ವತಃ ಜಿಲ್ಲಾಧಿಕಾರಿಯೇ ಹೇಳಿದ್ದಾರೆನ್ನಲಾಗಿದೆ. ಇಷ್ಟಾದರೂ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡು ಆಮ್ಲಜನಕ ವ್ಯವಸ್ಥೆ ಕಲ್ಪಿಸಬೇಕಾಗಿದ್ದ ಸರಕಾರ ಅದರ ಗೊಡವೆಗೇ ಹೋಗಿಲ್ಲ. ಕ್ಷೇತ್ರದ ಸಂಸದರು, ಉಸ್ತುವಾರಿ ಸಚಿವರು ಜನರ ದಿಕ್ಕು ತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಈ ಘಟನೆಗೆ ರಾಜ್ಯ ಸರಕಾರವೇ ನೇರ ಹೊಣೆಯಾಗಿದೆ. ಸಮಸ್ಯೆ ಬಗ್ಗೆ ಗಂಭೀರ ನಿರ್ಲಕ್ಷ್ಯ ತೋರಿದ ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧಪಟ್ಟ ಅಧಿಕಾರಿಗಳು ಘಟನೆಯ ಹೊಣೆ ಹೊತ್ತು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಹಾಗೂ ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು, ಸಂತ್ರಸ್ತರಿಗೆ ತಲಾ 1 ಕೋ.ರೂ.ಪರಿಹಾರ ನೀಡಬೇಕೆಂದು ಯಾಸಿರ್ ಹಸನ್ ಒತ್ತಾಯಿಸಿದ್ದಾರೆ.







