ನೀಟ್-ಪಿಜಿ ಪರೀಕ್ಷೆಗಳು ನಾಲ್ಕು ತಿಂಗಳು ಮುಂದೂಡಿಕೆ: ಕೋವಿಡ್ ಕರ್ತವ್ಯಕ್ಕೆ ಹೆಚ್ಚಿನ ಯುವವೈದ್ಯರ ನಿಯೋಜನೆ

ಹೊಸದಿಲ್ಲಿ,ಮೇ.3: ದೇಶದಲ್ಲಿ ಕೊರೋನವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ನಡೆಸಲಾಗುವ ನೀಟ್-ಪಿಜಿ ಪರೀಕ್ಷೆಗಳನ್ನು ಕನಿಷ್ಠ ನಾಲ್ಕು ತಿಂಗಳುಗಳ ಕಾಲ ಮುಂದೂಡಲಾಗಿದೆ ಮತ್ತು ಇದು ಕೋವಿಡ್-19 ಕರ್ತವ್ಯಗಳಿಗೆ ಹೆಚ್ಚಿನ ವೈದ್ಯರನ್ನು ನಿಯೋಜಿಸಲು ಸಾಧ್ಯವಾಗಿಸುತ್ತದೆ ಎಂದು ಪ್ರಧಾನಿ ಕಚೇರಿಯು ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಹಿರಿಯ ವೈದ್ಯರ ಉಸ್ತುವಾರಿಯಡಿ ದೂರವಾಣಿ ಸಮಾಲೋಚನೆಗೆ ಮತ್ತು ಸೌಮ್ಯ ಸ್ವರೂಪದ ಕೋವಿಡ್ ಪ್ರಕರಣಗಳನ್ನು ನೋಡಿಕೊಳ್ಳಲು ಬಳಸಿಕೊಳ್ಳಬಹುದು. ಮೆಡಿಕಲ್ ಇಂಟರ್ನಿಗಳನ್ನು ಅವರ ಬೋಧಕರ ಮಾರ್ಗದರ್ಶನದಲ್ಲಿ ಕೋವಿಡ್ ನಿರ್ವಹಣೆ ಕರ್ತವ್ಯಗಳಿಗೆ ನಿಯೋಜಿಸಬೇಕು. ಇದರಿಂದ ಹಾಲಿ ಕೋವಿಡ್ ಕರ್ತವ್ಯದಲ್ಲಿ ತೊಡಗಿರುವ ವೈದ್ಯರ ಮೇಲಿನ ಹೊರೆಯು ಕಡಿಮೆಯಾಗುತ್ತದೆ ಎಂದಿರುವ ಹೇಳಿಕೆಯು,ಹಿರಿಯ ವೈದ್ಯರು ಮತ್ತು ನರ್ಸ್‌ಗಳ ಉಸ್ತುವಾರಿಯಡಿ ಬಿಎಸ್‌ಸಿ ಅಥವಾ ಜಿಎನ್‌ಎಂ ಕ್ವಾಲಿಫೈಡ್ ನರ್ಸ್‌ಗಳನ್ನು ಪೂರ್ಣಕಾಲಿಕ ಸೇವೆಗಳಿಗೆ ಬಳಸಿಕೊಳ್ಳಬಹುದು ಎಂದು ತಿಳಿಸಿದೆ.
ಕೋವಿಡ್ ಸಂಬಂಧಿತ ಕರ್ತವ್ಯದಲ್ಲಿ ತೊಡಗಿಕೊಳ್ಳುವ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯಕೀಯ ವೃತ್ತಿಪರರಿಗೆ ಲಸಿಕೆಗಳನ್ನು ಕೊಡಿಸಲಾಗುವುದು ಎಂದಿರುವ ಹೇಳಿಕೆಯು,ಕೋವಿಡ್ ಕರ್ತವ್ಯಗಳಲ್ಲಿ ನೂರು ದಿನಗಳನ್ನು ಪೂರೈಸುವವರಿಗೆ ‘ಪ್ರಧಾನ ಮಂತ್ರಿಗಳ ವಿಶಿಷ್ಟ ಕೋವಿಡ್ ರಾಷ್ಟ್ರೀಯ ಸೇವಾ ಸಮ್ಮಾನ್’ನೊಂದಿಗೆ ಪುರಸ್ಕರಿಸಲಾಗುವುದು ಮತ್ತು ಮುಂಬರುವ ಸರಕಾರಿ ನೇಮಕಾತಿಗಳಲ್ಲಿ ಅವರಿಗೆ ಆದ್ಯತೆಯನ್ನು ನೀಡಲಾಗುವುದು. ಕೋವಿಡ್-19ರ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗಾಗಿ ಇರುವ ಸರಕಾರದ ವಿಮೆ ಯೋಜನೆಯು ಅವರಿಗೂ ಅನ್ವಯಿಸಲಿದೆ ಎಂದು ತಿಳಿಸಿದೆ.







