ಫೈಝರ್ ಕಂಪೆನಿಯಿಂದ ಭಾರತಕ್ಕೆ 510 ಕೋಟಿ ರೂ. ಔಷಧ ದೇಣಿಗೆ

ವಾಶಿಂಗ್ಟನ್, ಮೇ 3: ಜಾಗತಿಕ ಔಷಧ ಉತ್ಪಾದಕ ಕಂಪೆನಿ ಫೈಝರ್ 70 ಮಿಲಿಯ ಡಾಲರ್ (ಸುಮಾರು 510 ಕೋಟಿ ರೂಪಾಯಿಗೂ ಅಧಿಕ) ಮೌಲ್ಯದ ಔಷಧಿಗಳನ್ನು ತನ್ನ ಅಮೆರಿಕ, ಯುರೋಪ್ ಮತ್ತು ಏಶ್ಯಗಳಲ್ಲಿರುವ ವಿತರಣಾ ಕೇಂದ್ರಗಳಿಂದ ಭಾರತಕ್ಕೆ ಕಳುಹಿಸಿಕೊಡುತ್ತಿದೆ ಎಂದು ಕಂಪೆನಿಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಲ್ಬರ್ಟ್ ಬೋರ್ಲಾ ಸೋಮವಾರ ತಿಳಿಸಿದ್ದಾರೆ.
ಭಾರತದ ಕೋವಿಡ್-19 ಚಿಕಿತ್ಸಾ ವಿಧಾನದ ಭಾಗವೆಂಬುದಾಗಿ ಗುರುತಿಸಲಾಗಿರುವ ಔಷಧಿಗಳು ಇದರಲ್ಲಿವೆ.
ಭಾರತದಲ್ಲಿನ ಗಂಭೀರ ಕೋವಿಡ್-19 ಪರಿಸ್ಥಿತಿಯನ್ನು ನೋಡಿ ನಾವು ಕಳವಳಗೊಂಡಿದ್ದೇವೆ. ನಮ್ಮ ಹೃದಯವು ನಿಮಗಾಗಿ, ನಿಮ್ಮ ಪ್ರೀತಿಪಾತ್ರರಿಗಾಗಿ ಮತ್ತು ಭಾರತದ ಎಲ್ಲ ಜನತೆಗಾಗಿ ಮಿಡಿಯುತ್ತಿದೆ ಎಂದು ಫೈಝರ್ ಇಂಡಿಯಾದ ಉದ್ಯೋಗಿಗಳಿಗೆ ಕಳುಹಿಸಿದ ಇಮೇಲ್‌ನಲ್ಲಿ ಅವರು ಹೇಳಿದ್ದಾರೆ. ಈ ಪತ್ರವನ್ನು ಅವರು ತನ್ನ ಲಿಂಕ್ಡ್‌ಇನ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ದೇಶಾದ್ಯಂತವಿರುವ ಪ್ರತಿಯೊಂದು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನ ರೋಗಿಗಳು ಫೈಝರ್ ಔಷಧಿಗಳನ್ನು ಉಚಿತವಾಗಿ ಪಡೆಯಲು ಸಾಧ್ಯವಾಗುವಂತೆ ನಾವು ಈ ಔಷಧಿಗಳನ್ನು ನೀಡುತ್ತಿದ್ದೇವೆ ಎಂದು ಬೋರ್ಲಾ ಹೇಳಿದರು.
ಕೊರೋನ ಲಸಿಕೆಯ ಕ್ಷಿಪ್ರ ಬಳಕೆ ಅನುಮತಿಗಾಗಿ ಭಾರತ ಸರಕಾರದೊಂದಿಗೆ ಮಾತುಕತೆ: ಫೈಝರ್
ತನ್ನ ಕೋವಿಡ್-19 ಲಸಿಕೆಯನ್ನು ಭಾರತದಲ್ಲಿ ಬಳಸಲು ಶೀಘ್ರ ಅನುಮೋದನೆ ಪಡೆಯುವ ನಿಟ್ಟಿನಲ್ಲಿ ಅಮೆರಿಕದ ಔಷಧ ತಯಾರಿಕಾ ಕಂಪೆನಿ ಫೈಝರ್ ಭಾರತ ಸರಕಾರದೊಂದಿಗೆ ಮಾತುಕತೆಯಲ್ಲಿ ತೊಡಗಿದೆ ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಲ್ಬರ್ಟ್ ಬೋರ್ಲಾ ಸೋಮವಾರ ಹೇಳಿದ್ದಾರೆ.
ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಲಿಂಕ್ಡ್‌ಇನ್‌ನಲ್ಲಿ ಸಂದೇಶವೊಂದನ್ನು ಹಾಕಿದ್ದಾರೆ.
ಲಸಿಕೆಯ ಕ್ಷಿಪ್ರ ಬಳಕೆಗೆ ಅನುಮತಿ ಕೋರಿ ನಾವು ತಿಂಗಳುಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದೇವೆ. ದುರದೃಷ್ಟವಶಾತ್, ಲಸಿಕೆ ಇನ್ನೂ ಭಾರತದಲ್ಲಿ ನೋಂದಣಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.







