ಭಾರತದಿಂದ ಮರಳುವ ಆಸ್ಟ್ರೇಲಿಯ ಪ್ರಜೆಗಳಿಗೆ ಶಿಕ್ಷೆ: ಪ್ರಧಾನಿ ಸಮರ್ಥನೆ

ಮೆಲ್ಬರ್ನ್ (ಆಸ್ಟ್ರೇಲಿಯ), ಮೇ 3: ಭಾರತದಿಂದ ಆಸ್ಟ್ರೇಲಿಯ ಪ್ರಜೆಗಳು ಮರಳುವುದನ್ನು ನಿಷೇಧಿಸುವ ಹಾಗೂ ಮರಳಲು ಪ್ರಯತ್ನಿಸುವವರಿಗೆ ಜೈಲು ಮತ್ತು ದಂಡ ವಿಧಿಸುವ ತನ್ನ ಸರಕಾರದ ನಿರ್ಧಾರವನ್ನು ಆಸ್ಟ್ರೇಲಿಯ ಪ್ರಧಾನಿ ಸ್ಕಾಟ್ ಮೊರಿಸನ್ ಸೋಮವಾರ ಸಮರ್ಥಿಸಿಕೊಂಡಿದ್ದಾರೆ. ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಕೊರೋನ ವೈರಸ್‌ನ ಮೂರನೇ ಅಲೆಯನ್ನು ತಡೆಯುವುದಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಆಸ್ಟ್ರೇಲಿಯ ಪ್ರಜೆಗಳು 14 ದಿನಗಳಷ್ಟು ಕಾಲ ಭಾರತದಲ್ಲಿ ತಂಗಿದ್ದರೆ ಅವರು ಸ್ವದೇಶಕ್ಕೆ ಮರಳುವುದನ್ನು ಆಸ್ಟ್ರೇಲಿಯ ಸರಕಾರ ಇತ್ತೀಚೆಗೆ ನಿಷೇಧಿಸಿತ್ತು. ಆಸ್ಟ್ರೇಲಿಯ ಸರಕಾರ ಇಂಥ ನಿರ್ಧಾರವೊಂದನ್ನು ತೆಗೆದುಕೊಂಡಿರುವುದು ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ.
ಈ ಆದೇಶ ಉಲ್ಲಂಸುವವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಅಥವಾ 66,000 ಆಸ್ಟ್ರೇಲಿಯನ್ ಡಾಲರ್ (ಸುಮಾರು 37.60 ಲಕ್ಷ ರೂಪಾಯಿ) ದಂಡ ವಿಧಿಸುವ ಬೆದರಿಕೆಯನ್ನೂ ಅದು ಹಾಕಿತ್ತು.
ಇದೊಂದು ಕಷ್ಟದ ನಿರ್ಧಾರವಾಗಿತ್ತು. ಇಲ್ಲಿ ಆಸ್ಟ್ರೇಲಿಯದಲ್ಲಿ ಕೊರೋನ ವೈರಸ್‌ನ ಮೂರನೇ ಅಲೆಯನ್ನು ತಪ್ಪಿಸಲು ಹಾಗೂ ನಮ್ಮ ಕ್ವಾರಂಟೈನ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಉಳಿಸಿಕೊಳ್ಳಲು ಆ ನಿರ್ಧಾರವನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು ಎಂದು ಮೊರಿಸನ್ ಹೇಳಿದರು.







