ನಂದಿಗ್ರಾಮ ತೀರ್ಪು ಪ್ರಶ್ನಿಸಿ ನ್ಯಾಯಾಲಯಕ್ಕೆ ಮನವಿ: ಮಮತಾ ಬ್ಯಾನರ್ಜಿ

ಕೋಲ್ಕತಾ, ಮೆ 3: ಪಶ್ಚಿಮಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅನ್ನು ಐತಿಹಾಸಿಕ ಗೆಲುವಿನತ್ತ ಮುನ್ನಡೆಸಿದ ಒಂದು ದಿನಗಳ ಬಳಿಕ ಮಮತಾ ಬ್ಯಾನರ್ಜಿ, ತನ್ನ ಮಾಜಿ ಆಪ್ತ ಹಾಗೂ ಬಿಜೆಪಿ ಅಭ್ಯರ್ಥಿ ಸುವೇಂಧು ಅಧಿಕಾರಿಯಿಂದ ಸೋತ ನಂದಿಗ್ರಾಮದ ಚುನಾವಣಾ ಫಲಿತಾಂಶದ ಕುರಿತಂತೆ ನ್ಯಾಯಾಲಯದ ಮೆಟ್ಟಿಲೇರಲಾಗುವುದು ಎಂದು ಪ್ರತಿಜ್ಞೆ ಮಾಡಿದ್ದಾರೆ.
‘‘ಔಪಚಾರಿಕವಾಗಿ ಘೋಷಣೆ ಮಾಡಿದ ಬಳಿಕ ಚುನಾವಣಾ ಆಯೋಗ ಫಲಿತಾಂಶವನ್ನು ತಿರುಗಿಸಿರುವುದು ಹೇಗೆ? ನಾವು ನ್ಯಾಯಾಲಯದ ಮೆಟ್ಟಿಲೇರಲಿದ್ದೇವೆ’’ಎಂದು ಬ್ಯಾನರ್ಜಿ ಹೇಳಿದ್ದಾರೆ. ನಂದಿಗ್ರಾಮ ಕ್ಷೇತ್ರದ ಮತವನ್ನು ಕೂಡಲೇ ಮರು ಎಣಿಕೆ ಮಾಡುವಂತೆ ತನ್ನ ಮನವಿಯನ್ನು ಚುನಾವಣಾಧಿಕಾರಿ ತಿರಸ್ಕರಿಸಿದ ಬಳಿಕ ತೃಣಮೂಲ ಕಾಂಗ್ರೆಸ್ ಈ ಬಗ್ಗೆ ಮನವಿಯನ್ನು ಮರು ಪರಿಗಣಿಸುವಂತೆ ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿತ್ತು.
ನಂದಿಗ್ರಾಮದ ಮತಗಳ ಮರು ಎಣಿಕೆಗೆ ಅವಕಾಶ ನೀಡಿದರೆ ತನ್ನ ಜೀವಕ್ಕೆ ಅಪಾಯ ಇದೆ ಎಂದು ಚುನಾವಣಾ ಅಧಿಕಾರಿಯೊಬ್ಬರು ವ್ಯಕ್ತಿಯೊಬ್ಬರಿಗೆ ಕಳುಹಿಸಿದ ಎಸ್‌ಎಂಎಸ್ ಮತ್ತೊಬ್ಬರಿಂದ ನನಗೆ ದೊರಕಿದೆ. ನಾಲ್ಕು ಗಂಟೆಗಳ ಕಾಲ ಸರ್ವರ್ ಡೌನ್ ಆಗಿತ್ತು. ರಾಜ್ಯಪಾಲರು ಕೂಡ ನನಗೆ ಅಭಿನಂದನೆ ಸಲ್ಲಿಸಿದ್ದರು. ಇದ್ದಕ್ಕಿದ್ದಂತೆ, ಎಲ್ಲವೂ ಬದಲಾವಣೆಯಾಯಿತು ಎಂದು ಅವರು ದೂರಿದ್ದಾರೆ.
ವಿಧಾನ ಸಭೆ ಚುನಾವಣೆಯಲ್ಲಿ ಜಯ ಗಳಿಸಿದ ಬಳಿಕ ತನಗೆ ಪ್ರಧಾನಿ ಮಂತ್ರಿ ತನಗೆ ಕರೆ ಮಾಡಿ ಅಭಿನಂದಿಸದೇ ಇರುವುದು ಇದೇ ಮೊದಲ ಬಾರಿ ಎಂದು ಅವರು ಹೇಳಿದ್ದಾರೆ.
‘‘ಶಾಂತಿ ಕಾಪಾಡುವಂತೆ ಹಾಗೂ ಯಾವುದೇ ಹಿಂಸಾಚಾರದಲ್ಲಿ ತೊಡಗದಂತೆ ನಾನು ಪ್ರತಿಯೊಬ್ಬರಲ್ಲಿ ಮನವಿ ಮಾಡುತ್ತೇನೆ. ಕೇಂದ್ರದ ಪಡೆ ಹಾಗೂ ಬಿಜೆಪಿ ನಮಗೆ ಕಿರುಕುಳ ನೀಡಿರುವುದು ನಮಗೆ ಗೊತ್ತಿದೆ. ಆದರೆ, ನಾವು ಶಾಂತಿ ಕಾಪಾಡಬೇಕು’’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.