"ನಿಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು?": ಆದೇಶ ಪಾಲಿಸದ ಕೇಂದ್ರ ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಹೊಸದಿಲ್ಲಿ, ಮೇ 4: ನೀವು ಉಷ್ಟ್ರಪಕ್ಷಿಯಂತೆ ತಲೆಯನ್ನು ಮರಳಿನಲ್ಲಿ ಬಚ್ಚಿಡಬಹುದು. ಆದರೆ, ನಾವು ಹಾಗೆ ಮಾಡಲಾರೆವು. ನೀವು ದಂತಗೋಪುರದಲ್ಲಿ ಬದುಕುತ್ತಿದ್ದೀರಾ? ಎಂದು ಪ್ರಶ್ನಿಸಿದ ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು, ಕೇವಲ 490 ಮೆಟ್ರಿಕ್ ಟನ್ ಬದಲು 700 ಮೆಟ್ರಿಕ್ ಟನ್ ಆಮ್ಲಜನಕವನ್ನು ದಿಲ್ಲಿಗೆ ಪೂರೈಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನೀಡಿದ ಆದೇಶದ ಬಗ್ಗೆ ಗಮನ ಸೆಳೆದರು.
ದಿಲ್ಲಿಗೆ ಆಮ್ಲಜನಕದ ಪೂರ್ಣ ಪಾಲನ್ನು ಕೂಡಲೇ ಪೂರೈಕೆ ಮಾಡುವ ಕುರಿತು ದಿಲ್ಲಿ ಉಚ್ಚ ನ್ಯಾಯಾಲಯ ಹಾಗೂ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಅನುಷ್ಠಾನಗೊಳಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿರುವ ಬಗ್ಗೆ ನ್ಯಾಯಾಧೀಶರು ಕಿಡಿ ಕಾರಿದರು. ನ್ಯಾಯಮೂರ್ತಿ ವಿಪಿನ್ ಸಂಘಿ ಹಾಗೂ ರೇಖಾ ಪಲ್ಲಿ ಅವರನ್ನೊಳಗೊಂಡ ದಿಲ್ಲಿ ಉಚ್ಚ ನ್ಯಾಯಾಲಯದ ವಿಭಾಗೀಯ ನ್ಯಾಯ ಪೀಠ, ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ಯಾಕೆ ದಾಖಲಿಸಬಾರದು ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿತು. ದಿಲ್ಲಿಗೆ ಅಗತ್ಯ ಇರುವ ಆಮ್ಲಜನಕವನ್ನು ಪೂರೈಕೆ ಮಾಡಬೇಕೆಂಬ ಸುಪ್ರೀಂ ಕೋರ್ಟ್ ಹಾಗೂ ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶವನ್ನು ಅನುಸರಿಸುವಲ್ಲಿ ವಿಫಲವಾಗಿರುವ ಕುರಿತ ಶೋಕಾಸ್ ನೋಟಿಸಿಗೆ ಉತ್ತರಿಸುವಂತೆ ನಿರ್ದೇಶಿಸಿತು.
ಸಾಕು, ಆಮ್ಲಜನಕ ಪೂರೈಕೆಗೆ ಸಂಬಂಧಿಸಿ ‘ಇಲ್ಲ’ ಎಂಬ ಮಾತನ್ನು ನಾವು ಪರಿಗಣಿಸುವುದಿಲ್ಲ. ನೀವು ಕೂಡಲೇ 700 ಮೆಟ್ರಿಕ್ ಟನ್ ಆಮ್ಲಜನಕ ಪೂರೈಸದೇ ಇರಲು ಬೇರೆ ದಾರಿ ಇಲ್ಲ. ಅನುಸರಣೆ ಹೊರತುಪಡಿಸಿ ನಾವು ಯಾವುದನ್ನೂ ಆಲಿಸಲಾರೆವು ಎಂದು ನ್ಯಾಯಪೀಠ ಕಟುವಾಗಿ ಹೇಳಿತು.
ಎರಡು ವಾರಗಳಿಗಿಂತ ಹೆಚ್ಚು ಕಾಲ ಆಮ್ಲಜನಕ ಪೂರೈಕೆಯಲ್ಲಿ ಕೊರತೆ ಕುರಿತ ಮನವಿಗಳ ಗುಚ್ಛದ ವಿಚಾರಣೆಯನ್ನು ನ್ಯಾಯಾಪೀಠ ಮಂಗಳವಾರ ವಿಚಾರಣೆ ನಡೆಸಿತು. ಅನುಸರಣಾ ಅಫಿಡವಿಟ್ ಅನ್ನು ಬುಧವಾರ ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಲಾಗುವುದು ಎಂದು ಕೇಂದ್ರ ಸರಕಾರ ಹೇಳಿದಾಗ ಪೀಠ, ದಿಲ್ಲಿಗೆ ಅಗತ್ಯವಿರುವ ಆಮ್ಲಜನಕವನ್ನು ನೀಡದಿರುವಾಗ ಅಫಿಡವಿಟ್ ಏನು ಸಾಧಿಸುತ್ತದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳುವುದರಲ್ಲಿ ವಿಫಲರಾಗಿದ್ದೀರಿ. ದಿಲ್ಲಿಗೆ ಹಂಚಿಕೆ ಮಾಡಲಾದ ಆಮ್ಲಜನಕವನ್ನು ಒಂದು ದಿನವೂ ಪೂರೈಸಿಲ್ಲ ಎಂದು ಹೇಳಿತು. ‘‘ನೀವು ಎಲ್ಲದಕ್ಕೂ ವ್ಯವಸ್ಥೆ ಮಾಡಬೇಕು. ನೀವು ಆಮ್ಲಜನಕ ಹಂಚಿಕೆ ಮಾಡಬೇಕು. ನೀವು ಅದನ್ನು ಈಡೇರಿಸಬೇಕು. 8 ಜೀವಗಳನ್ನು ಕಳೆದುಕೊಂಡಿದ್ದೇವೆ. ನಾವು ಕಣ್ಣು ಮುಚ್ಚಿಕೊಂಡಿರಲು ಸಾಧ್ಯವಿಲ್ಲ’’ ಎಂದು ಪೀಠ ಹೇಳಿತು.