ಪಂಡಿತ ಛನ್ನುಲಾಲ್ ಮಿಶ್ರಾರ ಪುತ್ರಿ ಕೋವಿಡ್ಗೆ ಬಲಿ,ಆಸ್ಪತ್ರೆಯ ನಿರ್ಲಕ್ಷದ ಆರೋಪ

ಪಂಡಿತ ಛನ್ನುಲಾಲ್ ಮಿಶ್ರಾ
ಹೊಸದಿಲ್ಲಿ,ಮೇ 4: 2014ರ ಸಾರ್ವತ್ರಿಕ ಚುನಾವಣೆಗಳಲ್ಲಿ ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಉಮೇದುವಾರಿಕೆಯನ್ನು ಅನುಮೋದಿಸಿದ್ದ ಖ್ಯಾತ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತಕಾರ ಪಂಡಿತ ಛನ್ನುಲಾಲ್ ಮಿಶ್ರಾ ಅವರ ಪುತ್ರಿ ಸಂಗೀತಾ ಕೋವಿಡ್ನಿಂದಾಗಿ ನಿಧನರಾಗಿದ್ದಾರೆ. ತನ್ನ ಸೋದರಿಯ ಸಾವಿಗೆ ವಾರಣಾಸಿಯ ಖಾಸಗಿ ಆಸ್ಪತ್ರೆಯ ನಿರ್ಲಕ್ಷವೇ ಕಾರಣವೆಂದು ಆರೋಪಿಸಿ ಮಿಶ್ರಾರ ಕಿರಿಯ ಪುತ್ರಿ ನಮ್ರತಾ ಪೊಲೀಸ್ ದೂರನ್ನು ದಾಖಲಿಸಿದ್ದಾರೆ.
ಮಿಶ್ರಾರ ಪತ್ನಿ ಮನೋರಮಾ ಮಿಶ್ರಾ(76) ಅವರು ಎ.26ರಂದು ಕೋವಿಡ್ನಿಂದ ಮೃತಪಟ್ಟಿದ್ದರೆ,ಮೇ 1ರಂದು ಸಂಗೀತಾರ ಸಾವು ಸಂಭವಿಸಿದೆ.
ಸಂಗೀತಾರ ನಿಧನದ ಎರಡು ದಿನಗಳ ಬಳಿಕವೂ ಸಾವಿನ ಕುರಿತು ವಿವರಗಳು,ರೋಗಿಯ ದಾಖಲೆಗಳು ಅಥವಾ ಸಿಸಿಟಿವಿ ಫೂಟೇಜ್ನ್ನು ಒದಗಿಸಲು ಆಸ್ಪತ್ರೆಯು ವಿಫಲಗೊಂಡಿತ್ತು. ಇದರಿಂದ ಕ್ರುದ್ಧರಾಗಿದ್ದ ನಮ್ರತಾ ಆಸ್ಪತ್ರೆಗೆ ತೆರಳಿ ಉತ್ತರಗಳಿಗೆ ಆಗ್ರಹಿಸಿದ್ದರು. ಆಸ್ಪತ್ರೆಯ ವಿರುದ್ಧ ನಿರ್ಲಕ್ಷ ಮತ್ತು ಬಲವಂತದ ಹಣ ವಸೂಲಿ ಆರೋಪಗಳನ್ನು ಮಾಡಿದ ಅವರು ಕೋಲಾಹಲವನ್ನೇ ಸೃಷ್ಟಿಸಿದ್ದರು ಎನ್ನಲಾಗಿದೆ.