ಮುಂಬೈಗೆ ಹೊರಟ ಖಾಸಗಿ ಬಸ್ ಪೊಲೀಸ್ ವಶಕ್ಕೆ: ಚಾಲಕ ಸೆರೆ

ಉಡುಪಿ, ಮೇ 4: ಲಾಕ್‌ಡೌನ್ ಮಧ್ಯೆ ಮಂಗಳೂರಿನಿಂದ ಮುಂಬೈಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್‌ನ್ನು ಉಡುಪಿ ಪೊಲೀಸರು ಇಂದು ಮಧ್ಯಾಹ್ನ 2.30ಕ್ಕೆ ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಬಸ್ಸಿನಲ್ಲಿ ಒಬ್ಬರು ರೋಗಿಯನ್ನು ಕರೆದೊಯ್ಯುವ ನೆಪದಲ್ಲಿ ಒಟ್ಟು 13 ಮಂದಿ ಪ್ರಯಾಣಿಕರನ್ನು ಮುಂಬೈಗೆ ಸಾಗಿಸುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಉಡುಪಿ ನಗರ ಪೊಲೀಸ್ ನಿರೀಕ್ಷಕ ಪ್ರಮೋದ್ ನೇತೃತ್ವದ ತಂಡ ಬಸ್‌ನ್ನು ವಶಕ್ಕೆ ಪಡೆದು, ಚಾಲಕ ಅಬ್ದುಲ್ ಬಶೀರ್ ಬಂಟ್ವಾಳ ಎಂಬಾತನನ್ನು ಬಂಧಿಸಿದ್ದಾರೆ.
ಬಳಿಕ ಬಸ್ಸಿನಲ್ಲಿದ್ದ ರೋಗಿಯನ್ನು ಆ್ಯಂಬುಲೆನ್ಸ್ ಮೂಲಕ ಬೆಳಗಾವಿಗೆ ಕಳುಹಿಸಿಕೊಡಲಾಯಿತು. ಉಳಿದ ಪ್ರಯಾಣಿಕರನ್ನು ಬದಲಿ ವ್ಯವಸ್ಥೆ ಮೂಲಕ ವಾಪಾಸ್ಸು ಮಂಗಳೂರಿಗೆ ಕಳುಹಿಸಿಕೊಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಉಡುಪಿ ನಗರಸಭೆಯ ಪೌರಾಯುಕ್ತ ನೀಡಿದ ದೂರಿನಂತೆ ಬಸ್ ಚಾಲಕ ಮತ್ತು ಮಾಲಕನ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ಕೋವಿಡ್ ನಿಯಮ ಉಲ್ಲಂಘನೆ ಪ್ರರಣವನ್ನು ದಾಖಲಿಸಿಕೊಳ್ಳ ಲಾಗಿದೆ.





