ಉಡುಪಿ ಗ್ರಾಪಂಗಳ ಕೋವಿಡ್ ಕಾರ್ಯಪಡೆಗಳಿಗೆ ಸಿಇಓ ಮಾರ್ಗದರ್ಶನ

ಡಾ.ನವೀನ್ ಭಟ್
ಉಡುಪಿ, ಮೇ 4: ಸರಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳನ್ನು ನಿಯಂತ್ರಣ, ಪರೀಕ್ಷೆ, ಕ್ವಾರಂಟೈನ್, ಚಿಕಿತ್ಸೆ ಹಾಗೂ ಲಸಿಕೆ ನೀಡುವ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋವಿಡ್ ಕಾರ್ಯಪಡೆಗಳಿಗೆ ಪ್ರಸ್ತುತ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಉಡುಪಿ ಜಿಪಂನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಅವರು ಹಲವು ನಿರ್ದೇಶನಗಳನ್ನು ನೀಡಿದ್ದಾರೆ.
ಈ ಕುರಿತು ನಡೆಸಿದ ಸಭೆಯಲ್ಲಿ ಡಾ.ಭಟ್ ಅವರು ಕಾರ್ಯಪಡೆಯ ಸದಸ್ಯರಿಗೆ ಈ ಸೂಚನೆ, ನಿರ್ದೇಶನಗಳನ್ನು ನೀಡಿದ್ದಾರೆ. ಸುರಕ್ಷಿತ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಲಾಕ್ಡೌನ್ ನಿಯಮಗಳ ಪಾಲನೆಯ ಮೇಲ್ವಿಚಾರಣೆ ನಡೆಸುವಂತೆ ಕುರಿತಂತೆ ಅವರು ಸೂಚನೆಗಳನ್ನು ನೀಡಿದರು.
ಹೋಮ್ ಐಸೋಲೇಷನ್ ಹಾಗೂ ಹೋಮ್ ಕ್ವಾರಂಟೈನ್ನಲ್ಲಿರುವ ವ್ಯಕ್ತಿಗಳ ಮನೆಗಳಿಗೆ ಪ್ರತಿದಿನ ಭೇಟಿ ನೀಡಿ ಕಡ್ಡಾಯವಾಗಿ ಐಸೋಲೇಷನ್ ಹಾಗೂ ಕ್ವಾರಂಟೈನ್ ನಿಯಮಗಳನ್ನು ಪಾಲಿಸುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವಂತೆ ಅವರು ತಿಳಿಸಿದರು. ಅಲ್ಲದೇ ಪ್ರತಿದಿನದ ಅವರ ಆರೋಗ್ಯ ಸ್ಥಿತಿಯ ವರದಿಯನ್ನು ಗ್ರಾಪಂ ಕೋವಿಡ್ ನೋಡೆಲ್ ಅಧಿಕಾರಿಗಳ ಮೂಲಕ ತಾಲೂಕು ಕಾರ್ಯನಿರ್ವಹಣಾ ಧಿಕಾರಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ಗಳಿಗೆ ಸಲ್ಲಿಸುವಂತೆ ಹಾಗೂ ಅಗತ್ಯಬಿದ್ದ ರೋಗಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ಬಗ್ಗೆ ಕ್ರಮ ವಹಿಸುವಂತೆ ಸಿಇಓ ನಿರ್ದೇಶನ ನೀಡಿದರು.
ಕಾರ್ಯಪಡೆಗಳ ಮೇಲ್ವಿಚಾರಣೆಗೆ ಗ್ರಾಪಂವಾರು ಕೋವಿಡ್ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಇವರು ಪ್ರತಿದಿನ ವರದಿಯನ್ನು ತಾಪಂ ಇಓ ಅವರಿಗೆ ಸಲ್ಲಿಸಬೇಕಿದೆ. ತಾಲೂಕುವಾರು ಮೇಲ್ವಿಚಾರಣೆಯನ್ನು ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕು ಆರೋ ಗ್ಯಾಧಿಕಾರಿಗಳು ನಿರ್ವಹಿಸಲು ಸೂಚಿಸಲಾಗಿದೆ. ಪ್ರತಿದಿನ ಅಪರಾಹ್ನದ ವೇಳೆಗೆ ನೋಡೆಲ್ ಅಧಿಕಾರಿಗಳು ಸಲ್ಲಿಸಿದ ಗ್ರಾಪಂವಾರು ವರದಿ ಯಂತೆ ಪ್ರಕರಣವಾರು ಕ್ರಮಕೈಗೊಳ್ಳಲು ತಿಳಿಸಲಾಗಿದೆ. ಅಲ್ಲದೇ ಇವುಗಳ ಕ್ರೋಡೀಕೃತ ವರದಿಯನ್ನು ಪ್ರತಿದಿನ ಸಂಜೆ ಜಿಪಂಗೆ ಸಲ್ಲಿಸು ವಂತೆಯೂ ಸಿಇಓ ತಿಳಿಸಿದರು.
ಹೋಮ್ ಐಸೋಲೇಷನ್ ಹಾಗೂ ಹೋಮ್ ಕ್ವಾರಂಟೈನ್ನಲ್ಲಿರುವ ವ್ಯಕ್ತಿಗಳ ಆಹಾರ ಹಾಗೂ ಇತರ ಅಗತ್ಯ ವಸ್ತುಗಳನ್ನು ಪೂರೈಸಲು ಕ್ರಮ ತೆಗೆದು ಕೊಳ್ಳುವಂತೆ, ಗ್ರಾಪಂ ವ್ಯಾಪ್ತಿಯ ನಿರ್ಗತಿಕರು, ಬಡವರ ಆಹಾರ, ಅಗತ್ಯ ವಸ್ತುಗಳ ಹಾಗೂ ವಸತಿ ಅಗತ್ಯಗಳಿಗೆ ಕೂಡಲೇ ಸ್ಪಂಧಿಸು ವಂತೆಯೂ ಅವರು ಕಾರ್ಯಪಡೆಯ ಸದಸ್ಯರಿಗೆ ಸೂಚನೆಗಳನ್ನು ನೀಡಿದರು.
ಪ್ರಸ್ತುತ ಜಾರಿಯಲ್ಲಿರುವ 14 ದಿನಗಳ ಕರ್ಫ್ಯೂವನ್ನು ಯಶಸ್ವಿಗೊಳಿಸಲು ಗ್ರಾಮಗಳಲ್ಲಿ ಬೆಳಗ್ಗೆ 6 ರಿಂದ ಅಪರಾಹ್ನ 12 ರವರೆಗೆ ಅಗತ್ಯ ಸೇವೆಗಳ ಅಂಗಡಿಗಳು ಮಾತ್ರ ತೆರೆಯಲು ಹಾಗೂ ಅಪರಾಹ್ನದ ಬಳಿಕ ಆಸ್ಪತ್ರೆ, ಔಷಧಿ ಅಂಗಡಿಗಳು, ನಂದಿನಿ ಹಾಲಿನ ಬೂತ್ಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಅಂಗಡಿಗಳನ್ನು ಮುಚ್ಚಿಸಲು ಕ್ರಮ ತೆಗೆದುಕೊಳ್ಳುವಂತೆ ತಿಳಿಸಲಾಯಿತು.
ಕೋವಿಡ್ ಆಸ್ಪತ್ರೆ, ಅಂಬುಲೆನ್ಸ್ ಮಾಹಿತಿಗಳನ್ನು ತಕ್ಷಣ ನೀಡಿ ನೆರವಾಗಲು ಗ್ರಾಮ ಮಟ್ಟದಲ್ಲಿ ಸಹಾಯವಾಣಿ ಹಾಗೂ ಹೆಲ್ಫ್ ಡೆಸ್ಕ್ಗಳು ಈಗಾಗಲೇ ಕಾರ್ಯ ಆರಂಭಿಸಿವೆ.ಕೋವಿಡ್-19 ಹರಡದಂತೆ ತಡೆಗಟ್ಟುವುದು, ಪರೀಕ್ಷೆ ಕ್ವಾರಂಟೈನ್ಗಳನ್ನು ಪರಿಣಾಮಕಾರಿಯಾಗಿ ನಡೆಸಲು ಮಾಹಿತಿ, ಶಿಕ್ಷಣ, ಸಂವಹನ ಯೋಜನೆಯನ್ನು ವಿವಿಧ ಸಂಘಸಂಸ್ಥೆಗಳ ಹಾಗೂ ಎನ್ಜಿಓಗಳ ಸಹಕಾರದಲ್ಲಿ ಹಮ್ಮಿಕೊಳ್ಳಲು ಕ್ರಮವಹಿಸು ವಂತೆ ಡಾ.ಭಟ್ ತಿಳಿಸಿದರು.
ಮಾಹಿತಿ, ಶಿಕ್ಷಣ, ಸಂವಹನ ಯೋಜನೆ ಅನುಷ್ಠಾನ, ಸಹಾಯವಾಣಿ ನಿರ್ವಹಣೆ ಹಾಗೂ ಅಗತ್ಯ ವಸ್ತುಗಳ ಪೂರೈಕೆಗಳಿಗೆ ಪೂರಕವಾಗಿ ಸಹಕರಿಸಲು ಜಿಲ್ಲೆಯ ವಿವಿಧ ಸಂಘಸಂಸ್ಥೆಗಳು ಹಾಗೂ ಎನ್ಜಿಓಗಳನ್ನು ಕೋರಲಾಗಿದ್ದು, ರೋಟರಿ ಕ್ಲಬ್, ರೆಡ್ಕ್ರಾಸ್, ನಮ್ಮ ಭೂಮಿ, ಬಿವಿಟಿ, ನೆಹರು ಯುವ ಕೇಂದ್ರಗಳು ಆಸಕ್ತಿ ವಹಿಸಿ ಮುಂದೆ ಬಂದಿವೆ ಎಂದೂ ಅವರು ಹೇಳಿದರು.







