ಅಫಜಲಪುರ ಆಸ್ಪತ್ರೆಯಲ್ಲಿ ರೋಗಿಗಳ ಸಾವಿಗೆ ಆಕ್ಸಿಜನ್ ಕೊರತೆ ಕಾರಣವಲ್ಲ: ಕಲಬುರಗಿ ಡಿಸಿ ಜ್ಯೋತ್ಸ್ನಾ ಸ್ಪಷ್ಟನೆ

ಕಲಬುರಗಿ, ಮೇ 4: ಅಫಜಲಪುರ ಸರ್ಕಾರಿ ಆಸ್ಪತ್ರೆಯಲ್ಲಿ ಯಾವತ್ತೂ ಆಕ್ಸಿಜನ್ ಕೊರತೆಯಾಗಿಲ್ಲ. ಯಾವ ರೋಗಿಯೂ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿಲ್ಲ ಎಂದು ಜಿಲ್ಲಾಧಿಕಾರಿಗಳಾದ ವಿ.ವಿ. ಜ್ಯೋತ್ಸ್ನಾ ಅವರು ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, ಇಬ್ಬರು ಕೋವಿಡ್ ಸೋಂಕಿತರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಆದರೆ, ಇವರು ಆಮ್ಲಜನಕ ತೊಂದರೆಯಿಂದ ಸಾವನ್ನಪ್ಪಿಲ್ಲ ಎಂದು ಹೇಳಿದರು.
ತಪ್ಪು ಮಾಹಿತಿಯಿಂದ ಮಾಧ್ಯಮಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ ಎಂದು ಪ್ರಸಾರವಾಗಿದೆ. ಮೃತಪಟ್ಟ ರೋಗಿಗಳು ವಿವಿಧ ಕಾರಣಗಳಿಂದ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.
ಅಫಜಲಪುರ ಸೇರಿದಂತೆ ಎಲ್ಲಾ ಕೋವಿಡ್ ಆಸ್ಪತ್ರೆಗಳಿಗೆ ಆಕ್ಸಿಜನ್ ಸಿಲಿಂಡರ್ ಖಾಲಿಯಾದ ತಕ್ಷಣ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ಮೂಲಕ ಭರ್ತಿಮಾಡಿದ ಸಿಲಿಂಡರ್ ಗಳನ್ನು ಪೂರೈಸಲಾಗುತ್ತದೆ ಎಂದು ಅವರು ವಿವರಿಸಿದರು. ಇದರಲ್ಲಿ ಆಡಳಿತದ್ದಾಗಲಿ ಅಥವಾ ತಾಲೂಕು ಅಸ್ಪತ್ರೆಯದ್ದಾಗಲೀ ಕರ್ತವ್ಯ ಲೋಪ ಇಲ್ಲ ಎಂದು ಅವರು ಹೇಳಿದರು.
ಈ ಪ್ರಕರಣ ಕುರಿತು ಸಹಾಯಕ ಆಯುಕ್ತ ಮತ್ತು ತಹಶೀಲ್ದಾರರಿಗೆ ವರದಿ ನೀಡುವಂತೆ ಸೂಚಿಸಲಾಗಿದ್ದು, ವರದಿ ಬಂದ ನಂತರ ಸಂಪೂರ್ಣ ಮಾಹಿತಿ ನೀಡುವುದಾಗಿ ಅವರು ತಿಳಿಸಿದರು. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಅಕ್ಸಿಜನ್ ಪ್ರಮಾಣದ ಬೇಡಿಕೆ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿರುವ ನಾಲ್ಕು ಆಕ್ಸಿಜನ್ ಪ್ಲಾಂಟ್ ಗಳಿಂದ ಪೂರೈಕೆಯಾಗುತ್ತಿದೆ. ಇತರೆಡೆಯಿಂದಲೂ ಅಗತ್ಯ ಆಮ್ಲಜನಕ ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಶ ಶಶಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಗಣಜಲ್ ಖೇಡ್ ಅವರು ಇದ್ದರು.







