ಪ.ಬಂಗಾಳ: ರಿಯಲ್ ಎಸ್ಟೇಟ್ ಕಾನೂನನ್ನು ರದ್ದುಗೊಳಿಸಿದ ಸುಪ್ರೀಂಕೋರ್ಟ್

ಹೊಸದಿಲ್ಲಿ, ಮೇ 4: ರಿಯಲ್ ಎಸ್ಟೇಟ್ ಕ್ಷೇತ್ರದ ನಿಯಂತ್ರಣಕ್ಕೆ ಪಶ್ಚಿಮ ಬಂಗಾಳ ಸರಕಾರ ರೂಪಿಸಿದ್ದ ಕಾನೂನನ್ನು ಸುಪ್ರೀಂಕೋರ್ಟ್ ಮಂಗಳವಾರ ರದ್ದುಗೊಳಿಸಿದ್ದು, ಇದು ಕೇಂದ್ರದ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆಯನ್ನು ಅತಿಕ್ರಮಿಸುವುದರಿಂದ (ಮೀರುವುದರಿಂದ) ಅಸಾಂವಿಧಾನಿಕವಾಗಿದೆ ಎಂದು ಹೇಳಿದೆ.
ಮನೆ ಖರೀದಿಸುವವರ ಹಿತರಕ್ಷಣೆಯ ಅಂಶವನ್ನು 2017ರ ಈ ಕಾನೂನಿನಲ್ಲಿ ನಿರ್ಲಕ್ಷಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಎಂ.ಆರ್ ಶಾ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಪಶ್ಚಿಮ ಬಂಗಾಳ ಸರಕಾರದ ಕಾನೂನು ಬಹುತೇಕ ಕೇಂದ್ರದ ಕಾನೂನಿನಂತೆಯೇ ಇರುವುದರಿಂದ ಇದು ಅಸಂಗತ ಕಾನೂನಾಗಿದೆ. ಸಂಸತ್ತಿನ ಅಧಿಪತ್ಯವನ್ನು ಅತಿಕ್ರಮಿಸಿದ ಈ ಕಾನೂನು ಅಸಾಂವಿಧಾನಿಕವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಈ ತೀರ್ಪು ಪ್ರಕಟವಾಗುವ ಮುನ್ನ ಮನೆ ಖರೀದಿಸಿದವರು ಆತಂಕ ಪಡಬೇಕಿಲ್ಲ. ಮನೆ ನೋಂದಣಿ ಹಾಗೂ ಇತರ ನಿಯಮಗಳು ಅವರಿಗೂ ಅನ್ವಯಿಸುತ್ತದೆ. ತೀರ್ಪಿಗೂ ಮುನ್ನ ರಾಜ್ಯದ ಹೊಸ ಕಾನೂನಿನಡಿ ಆಸ್ತಿಗಳ ನೋಂದಣಿ ಪ್ರಕ್ರಿಯೆಯನ್ನು 142 ಕಲಂನ ಅಧಿಕಾರ ಬಳಸಿ ತಡೆಹಿಡಿಯುವ ಅಧಿಕಾರ ಸುಪ್ರೀಂಕೋರ್ಟ್‌ಗೆ ಇದೆ ಎಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದ ವಿಚಾರಣೆ ಸಂದರ್ಭ ನ್ಯಾಯಪೀಠ ಹೇಳಿದೆ.ಪಶ್ಚಿಮ ಬಂಗಾಳ ಸರಕಾರ 2017ರಲ್ಲಿ ಜಾರಿಗೆ ತಂದಿದ್ದ ಪಶ್ಚಿಮ ಬಂಗಾಳ ಹೌಸಿಂಗ್ ಇಂಡಸ್ಟ್ರಿ ರೆಗ್ಯುಲೇಷನ್ ಆ್ಯಕ್ಟ್‌ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ‘ಫಾರಂ ಫಾರ್ ಪೀಪಲ್ಸ್ ಕಲೆಕ್ಟಿವ್ ಎಫರ್ಟ್ಸ್’ ಎಂಬ ಸಂಸ್ಥೆ ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಿತ್ತು.
ಸಹಕಾರಿ ಒಕ್ಕೂಟ ವ್ಯವಸ್ಥೆಯಡಿ, ಸಂಸತ್ತು ಅನುಮೋದನೆಗೊಳಿಸಿದ ಕಾನೂನಿಗೆ ಸರಿಸಮವಾದ ಕಾನೂನನ್ನು ರಾಜ್ಯ ಸರಕಾರ ಹೇಗೆ ಜಾರಿಗೊಳಿಸಲು ಸಾಧ್ಯ ಎಂದು ಸುಪ್ರೀಂಕೋರ್ಟ್ ಅಚ್ಚರಿ ವ್ಯಕ್ತಪಡಿಸಿತು. ರಾಜ್ಯ ಸರಕಾರ ಕಾನೂನು ಜಾರಿಗೊಳಿಸಬಹುದು. ಆದರೆ ಕೇಂದ್ರ ಸರಕಾರದ ಕಾನೂನನ್ನು ಮೀರಿ ಹೊಸ ಕಾನೂನು ಜಾರಿಗೆ ಅವಕಾಶವಿಲ್ಲ. ಇನ್ನುಮುಂದೆ ನಿಮ್ಮ ಕಾನೂನನ್ನು ನಾವು ಪಾಲಿಸಲಾಗದು ಎಂದು ಪಶ್ಚಿಮ ಬಂಗಾಳ ಸರಕಾರಕ್ಕೆ ಸೂಚಿಸಿತು. ಕೇಂದ್ರ ಸರಕಾರದ ಕಾನೂನಿಗೆ ಹೋಲುವ ಕಾನೂನು ಜಾರಿಗೊಳಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿ ಪಶ್ಚಿಮ ಬಂಗಾಳ ಸರಕಾರದ ಕಾನೂನನ್ನು ರದ್ದುಗೊಳಿಸಿದೆ.







