ಆಮ್ಲಜನಕ ಟ್ಯಾಂಕರ್ ಹಂಚಿಕೆ ಕಾರ್ಯವನ್ನು ಐಐಟಿ, ಐಐಎಂಗೆ ಹಸ್ತಾಂತರಿಸಿ: ಕೇಂದ್ರ ಸರಾಕಾರಕ್ಕೆ ದಿಲ್ಲಿ ಹೈಕೋರ್ಟ್ ತರಾಟೆ

ಹೊಸದಿಲ್ಲಿ, ಮೆ 4: ದಿಲ್ಲಿಯ ಆಮ್ಲಜನಕದ ಬಿಕ್ಕಟ್ಟಿನ ಕುರಿತು ದಿಲ್ಲಿ ಉಚ್ಚ ನ್ಯಾಯಾಲಯ ಮಂಗಳವಾರ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ ಹಾಗೂ ಆಮ್ಲಜನಕ ವಿತರಣೆಯನ್ನು ಕೇಂದ್ರ ಸರಕಾರಕ್ಕಿಂತ ಐಐಟಿ ಹಾಗೂ ಐಐಎಂಗಳು ಉತ್ತಮವಾಗಿ ನಿರ್ವಹಿಸಬಹುದು ಎಂದು ಹೇಳಿದೆ. ದೇಶಾದ್ಯಂತ ತೀವ್ರ ಕೋವಿಡ್ ಬಿಕ್ಕಟ್ಟನ್ನು ನಿರ್ವಹಿಸಲು ಸೇನೆ ನಿಯೋಜಿಸುವ ಕುರಿತು ಕೇಂದ್ರದ ಯೋಜನೆಗಳು ಏನು ಎಂಬುದನ್ನು ತಿಳಿಯಲು ಬಯಸುವುದಾಗಿ ನ್ಯಾಯಾಲಯ ಹೇಳಿದೆ. ಸಾಕಷ್ಟು ಆಮ್ಲಜನಕ ಹಾಗೂ ಆಮ್ಲಜನಕದ ಸಿಲಿಂಡರ್‌ಗಳಿವೆ. ಆದರೆ, ಸೂಕ್ತ ರೀತಿಯಲ್ಲಿ ವಿತರಣೆಯಾಗುತ್ತಿಲ್ಲ ಎಂದು ದಿಲ್ಲಿ ಸರಕಾರ ಅಂಕಿ-ಅಂಶಗಳನ್ನು ಪ್ರಸ್ತುತಪಡಿಸಿದ ಬಳಿಕ ದಿಲ್ಲಿ ಹೈಕೋರ್ಟ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಎಲ್ಲಾ ಟ್ಯಾಂಕರ್ (ಕ್ರಯೋಜೆನಿಕ್, ನೈಟ್ರೊಜೆನಿಕ್ ಹಾಗೂ ಆರ್ಗನ್ ಟ್ಯಾಂಕರ್)ಗಳು ಒಟ್ಟು 1600ಗೂ ಅಧಿಕ ಮೆಟ್ರಿಕ್ ಟನ್ ಸಾಗಾಟ ಮಾಡುವ ಸಾಮರ್ಥ್ಯ ಹೊಂದಿದ್ದರೂ ಇದರಲ್ಲಿ ಮೂರನೇ ಒಂದು ಭಾಗ ಮಾತ್ರ ಹಂಚಿಕೆ ಮಾಡಲಾಗಿದೆ ಎಂದು ದಿಲ್ಲಿ ಸರಕಾರ ಹೇಳಿದೆ. ‘‘ದೇಶಾದ್ಯಂತ 8608 ಮೆಟ್ರಿಕ್ ಟನ್ ಆಮ್ಲಜನಕವನ್ನು ಸಾಗಿಸಲು ಟ್ಯಾಂಕರ್‌ಗಳಿಗೆ ನಮ್ಮಲ್ಲಿ ಯಾವುದೇ ಕೊರತೆ ಇಲ್ಲ ಎಂದು ಇದು ತೋರಿಸುತ್ತದೆ. ನಮ್ಮಲ್ಲಿ ಟ್ಯಾಂಕರ್‌ಗಳು ಇವೆ ಎಂಬುದು ಸ್ಪಷ್ಟ. ಅಲ್ಲದೆ, ಹೆಚ್ಚುವರಿ ಆಮ್ಲಜನಕ ಮಾತ್ರವಲ್ಲ ಹೆಚ್ಚುವರಿ ಟ್ಯಾಂಕರ್‌ಗಳು ಕೂಡ ಇವೆ’’ ಎಂದು ದಿಲ್ಲಿ ಸರಕಾರ ಪ್ರತಿಪಾದಿಸಿತು. ಇದಕ್ಕೆ ಕೇಂದ್ರ ಸರಕಾರ ಆಕ್ಷೇಪ ವ್ಯಕ್ತಪಡಿಸಿತು. ಆದರೆ, ಕೇಂದ್ರ ಸರಕಾರದ ನಿಲುವನ್ನು ಹೈಕೋರ್ಟ್ ನಿರಾಕರಿಸಿತು. ಅಲ್ಲದೆ, ‘‘ದಿಲ್ಲಿ ಸರಕಾರ ಪ್ರಸ್ತುತಪಡಿಸಿದ ಅಂಕಿ-ಅಂಶಗಳು ವಾಸ್ತವವಾಗಿದೆ. ನೀವು ಆಮ್ಲಜನಕದ ಟ್ಯಾಂಕರ್‌ಗಳ ಹಂಚಿಕೆಯನ್ನು ಐಐಟಿ ಅಥವಾ ಐಐಎಂಗೆ ಹಸ್ತಾಂತರಿಸಬೇಕು ಅವರು ಈ ಕೆಲಸವನ್ನು ನಿಮಗಿಂತ ಚೆನ್ನಾಗಿ ಮಾಡಬಹುದು’’ ಎಂದು ದಿಲ್ಲಿ ಹೈಕೋರ್ಟ್ ಹೇಳಿತು.