ಹೈದರಾಬಾದ್ ಮೃಗಾಲಯದ 8 ಸಿಂಹಗಳಿಗೆ ಕೋವಿಡ್ ಪಾಸಿಟಿವ್!
ಭಾರತದಿಂದ ವರದಿಯಾದ ಮೊದಲ ಪ್ರಕರಣ

ಸಾಂದರ್ಭಿಕ ಚಿತ್ರ
ಹೈದರಾಬಾದ್: ಹೈದರಾಬಾದ್ನ ನೆಹರೂ ಝೂಲಾಜಿಕಲ್ ಪಾರ್ಕ್ನಲ್ಲಿರುವ ಎಂಟು ಏಷ್ಯಾಟಿಕ್ ಸಿಂಹಗಳಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಇದು ಭಾರತದಲ್ಲಿ ಪ್ರಾಣಿಗಳಲ್ಲಿ ದೃಢಪಟ್ಟ ಮೊದಲ ಕೊರೋನ ವೈರಸ್ ಪ್ರಕರಣವಾಗಿದೆ ಎಂದು ವರದಿಯಾಗಿದೆ.
ಸೋಂಕಿತ ಪ್ರಾಣಿಗಳ ಆರ್ಟಿ-ಪಿಸಿಆರ್ ಪರೀಕ್ಷೆಗಳನ್ನು ಹೈದರಾಬಾದ್ನ ಸೆಲ್ಯುಲಾರ್ ಹಾಗೂ ಆಣ್ವಿಕ ಜೀವಶಾಸ್ತ್ರ ಕೇಂದ್ರವು ನಡೆಸಿತು. ಸಿಂಹಗಳ ಮೂಗಿನ ಮತ್ತು ಗಂಟಲಿನ ಮಾದರಿಗಳನ್ನು (ಒರೊಫಾರ್ಂಜಿಯಲ್ ಸ್ವ್ಯಾಬ್) ಪರೀಕ್ಷಿಸಿತು. ಕಳೆದ ವಾರ ಮೃಗಾಲಯದ ಅಧಿಕಾರಿಗಳು ಒಣ ಕಫ, ಮೂಗಿನ ವಿಸರ್ಜನೆ ಮತ್ತು ಹಸಿವಿನ ಕೊರತೆಯಿಂದ ಸಿಂಹಗಳು ಬಳಲುತ್ತಿರುವುದನ್ನು ನೋಡಿದಾಗ ಎಚ್ಚರಿಕೆ ನೀಡಿದ್ದರು.
News 18 ರೊಂದಿಗೆ ಮಾತನಾಡಿದ ಸಿಸಿಎಂಬಿ ನಿರ್ದೇಶಕ ಡಾ.ರಾಕೇಶ್ ಮಿಶ್ರಾ, ಸಿಂಹಗಳಿಗೆ ಎ 2 ಎ ಮೂಲ ಮಾದರಿಯಿಂದ ಉಂಟಾಗುವ ಸೌಮ್ಯ ಲಕ್ಷಣಗಳ ಸೋಂಕಿಗೆ ಒಳಗಾಗಿದ್ದು ಸ್ಥಿರ ಸ್ಥಿತಿಯಲ್ಲಿವೆ. ಸದ್ಯಕ್ಕೆ ಸೋಂಕಿತ ಪ್ರಾಣಿಗಳನ್ನು ಸಂಪೂರ್ಣವಾಗಿ ಪ್ರತ್ಯೇಕಿಸಲಾಗಿದೆ ಹಾಗೂ ಅವುಗಳನ್ನು ನೋಡಿಕೊಳ್ಳುವ ಝೂಕೀಪರ್ಗಳು ಪಿಪಿಇ ಮತ್ತು ಮಾಸ್ಕ್ ಗಳನ್ನು ಧರಿಸಲು ಕೇಳಿಕೊಳ್ಳಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನೆಹರೂ ಝೂಲಾಜಿಕಲ್ ಪಾರ್ಕ್ ಅನ್ನು ಸಾರ್ವಜನಿಕರಿಗೆ ಮುಚ್ಚಲಾಗಿದೆ. ಮೃಗಾಲಯದ ಇತರ ಪ್ರಾಣಿಗಳ ಮೇಲೆ ಇಡಲಾಗಿದೆ ಎಂದಿದ್ದಾರೆ.
ಇದು ವಿಶ್ವದಲ್ಲೇ ಮೊದಲ ಘಟನೆ ಅಲ್ಲ
ಕಳೆದ ವರ್ಷ ಎಪ್ರಿಲ್ನಲ್ಲಿ ನ್ಯೂಯಾರ್ಕ್ ನಗರದ ಬ್ರಾಂಕ್ಸ್ ಮೃಗಾಲಯದಲ್ಲಿ ನಾಲ್ಕು ವರ್ಷದ ಹೆಣ್ಣು ಹುಲಿ ‘ನಾಡಿಯಾ’ ಹಾಗೂ ಇತರ ಆರು ಮರಿಗೆ ಕೊರೋನ ಪಾಸಿಟಿವ್ ಆಗಿತ್ತು. ಝೂ ಕೀಪರ್ ಗೆ ಸೋಂಕಿನ ಸೌಮ್ಯ ಲಕ್ಷಣ ಕಾಣಿಸಿದ ನಂತರ ಪ್ರಾಣಿಗಳು ಸೋಂಕಿಗೆ ಒಳಗಾಗಿದ್ದವು.