ಲಸಿಕೆ ಅಭಿಯಾನದಲ್ಲಿ ಏರ್ ಇಂಡಿಯಾ ವಿಮಾನದ ಸಿಬಂದಿಗೆ ತಾರತಮ್ಯ: ಆರೋಪ
ಕೆಲಸ ಸ್ಥಗಿತದ ಎಚ್ಚರಿಕೆ ನೀಡಿದ ಪೈಲಟ್ ಯೂನಿಯನ್

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಮೇ 4: ಕೋವಿಡ್-19 ಲಸಿಕೆ ಅಭಿಯಾನದ ಕುರಿತು ಏರ್ ಇಂಡಿಯಾ ನಿರ್ದೇಶಕರು ಹೊರಡಿಸಿರುವ ಮಾರ್ಗಸೂಚಿಯಲ್ಲಿ ಪೈಲಟ್ಗಳನ್ನು ಕೈಬಿಟ್ಟಿರುವ ಬಗ್ಗೆ ತೀವ್ರ ಆಕ್ಷೇಪ ಸೂಚಿಸಿರುವ ಏರ್ಇಂಡಿಯಾ ಪೈಲಟ್ ಯೂನಿಯನ್, 18 ವರ್ಷ ಮೀರಿದ ವಿಮಾನದ ಸಿಬಂದಿಗಳಿಗೆ ದೇಶದಾದ್ಯಂತ ಲಸಿಕೆ ಹಾಕುವ ವ್ಯವಸ್ಥೆ ಮಾಡದಿದ್ದರೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಸ್ವಂತ ಸೇವೆಗೆ ಆದ್ಯತೆ ನೀಡಿರುವ ಆಡಳಿತ ವರ್ಗ ವಿಮಾನ ಹಾರಾಟದ ಸಿಬಂದಿಗಳನ್ನು ಕೈಬಿಟ್ಟಿರುವಂತೆ ನಮಗೆ ಅನಿಸಿದೆ. ಕಚೇರಿಯೊಳಗೆ, ಅದರಲ್ಲೂ ಬಹುತೇಕ ವರ್ಕ್ ಫ್ರಮ್ ಹೋಂ ವ್ಯವಸ್ಥೆಯಲ್ಲಿರುವ ಉದ್ಯೋಗಿಗಳಿಗೆ ಲಸಿಕೆ ಶಿಬಿರ ಆಯೋಜಿಸಲಾಗಿದೆ. ಆದರೆ ವಿಮಾನದ ಸಿಬ್ಬಂದಿಗಳನ್ನು ಮಾತ್ರ ಕೈಬಿಡಲಾಗಿದೆ. ಈ ಅವ್ಯವಸ್ಥೆ ಸರಿಪಡಿಸಿ, 18 ವರ್ಷ ಮೀರಿದ ವಿಮಾನದ ಸಿಬಂದಿಗಳಿಗೆ ದೇಶದಾದ್ಯಂತ ಲಸಿಕೆ ಹಾಕುವ ವ್ಯವಸ್ಥೆ ಮಾಡದಿದ್ದರೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಏರ್ ಇಂಡಿಯಾ ವಾಣಿಜ್ಯ ಪೈಲಟ್ಗಳ ಯೂನಿಯನ್ನ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಟಿ ಪ್ರವೀಣ್ ಕೀರ್ತಿ ಏರ್ ಇಂಡಿಯಾ ನಿರ್ದೇಶಕ ಕ್ಯಾಪ್ಟನ್ ಆರ್ಎಸ್ ಸಂಧುಗೆ ಬರೆದಿರುವ ಪತ್ರದಲ್ಲಿ ಎಚ್ಚರಿಸಿದ್ದಾರೆ.
ಏರ್ ಇಂಡಿಯಾ ವಾಣಿಜ್ಯ ಪೈಲಟ್ಗಳ ಯೂನಿಯನ್ನಲ್ಲಿ ಸುಮಾರು 1,000 ಪೈಲಟ್ಗಳಿದ್ದಾರೆ. ಏರ್ ಇಂಡಿಯಾದ ಹಲವು ಸಿಬಂದಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು ಆಮ್ಲಜನಕದ ಸಿಲಿಂಡರ್ಗಾಗಿ ಒದ್ದಾಡುವಂತಾಗಿದೆ. ಆಡಳಿತ ವರ್ಗದವರು ಸುತ್ತೋಲೆ, ನೋಟಿಸ್ ಹೊರಡಿಸುವದನ್ನು ಬಿಟ್ಟರೆ ಬೇರೇನೂ ಮಾಡುತ್ತಿಲ್ಲ. ಕೇವಲ ಬಾಯ್ಮಿತಿನಲ್ಲೇ ಮುಗಿಸಿಬಿಡುತ್ತಾರೆ ಎಂದು ಪೈಲಟ್ ಯೂನಿಯನ್ ಅಸಮಾಧಾನ ಸೂಚಿಸಿದೆ.