ಉತ್ತರ ಪ್ರದೇಶದ ಪ್ರತಿ ಜಿಲ್ಲೆಯಲ್ಲಿ ಗೋವುಗಳಿಗೆ ಹೆಲ್ಪ್ ಡೆಸ್ಕ್, ವೈದ್ಯಕೀಯ ಸವಲತ್ತು: ಆದಿತ್ಯನಾಥ್ ಆದೇಶ
ಗೋಶಾಲೆಗಳಲ್ಲಿ ಕೋವಿಡ್ ಮಾರ್ಗಸೂಚಿ ಅನುಸರಿಸಲು ಸೂಚನೆ

ಹೊಸದಿಲ್ಲಿ: ಉತ್ತರ ಪ್ರದೇಶದ ಪ್ರತಿಯೊಂದು ಜಿಲ್ಲೆಯಲ್ಲಿ ಗೋ ಸಂರಕ್ಷಣೆಯ ಉದ್ದೇಶದಿಂದ ಹೆಲ್ಪ್ ಡೆಸ್ಕ್ ಸ್ಥಾಪಿಸುವಂತೆ ಹಾಗೂ ಜಾನುವಾರುಗಳಿಗೆ ಸೂಕ್ತ ವೈದ್ಯಕೀಯ ಸವಲತ್ತು ದೊರೆಯುವಂತೆ ನೋಡಿಕೊಳ್ಳಲು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.
ರಾಜ್ಯದ ಎಲ್ಲಾ ಗೋ ಶಾಲೆಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಹಾಗೂ ಅಲ್ಲಿ ದನಗಳು ಹಾಗೂ ಇತರ ಪ್ರಾಣಿಗಳಿಗೆ ಸಹ ಆಕ್ಸಿಮೀಟರ್ ಹಾಗೂ ಥರ್ಮಲ್ ಸ್ಕ್ಯಾನರ್ ಗಳನ್ನು ಇರಿಸುವಂತೆ ಆದಿತ್ಯನಾಥ್ ಸೂಚಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಆತಂಕಕಾರಿಯಾಗಿ ಏರಿಕೆಯಾಗುತ್ತಿರುವ ನಡುವೆ ಅಲ್ಲಿ ಆಕ್ಸಿಜನ್ ಸಹಿತ ಇತರ ವೈದ್ಯಕೀಯ ಅಗತ್ಯತೆಗಳ ಕೊರತೆ ಎದುರಾಗಿರುವಂತೆಯೇ ಮುಖ್ಯಮಂತ್ರಿಯ ಹೊಸ ಆದೇಶ ಹೊರಬಿದ್ದಿದೆ. ತಮ್ಮ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ ಎಂದೂ ಅವರು ಹೇಳಿಕೊಂಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಗೋಹತ್ಯೆ ನಿಷೇಧ ಜಾರಿಗೆ ಬಂದ ನಂತರ ಅಲ್ಲಿ ಅಲೆಮಾರಿ ದನಗಳ ಹಾವಳಿ ಅಧಿಕವಾಗಿದೆ. ರಾಜ್ಯದಲ್ಲಿ ಅಲೆಮಾರಿ ದನಗಳ ಸಮಸ್ಯೆ ಪರಿಹಾರಕ್ಕೆ ಕೋರಿ ಕೆಲ ಸಮಯದ ಹಿಂದೆ 35 ಮಂದಿ ಗ್ರಾಮಸ್ಥರು ಮುಖ್ಯಮಂತ್ರಿಯನ್ನು ಭೇಟಿಯಾಗಲು ಯತ್ನಿಸಿದ ಘಟನೆಯೂ ನಡೆದಿತ್ತು.
ಉತ್ತರ ಪ್ರದೇಶದಲ್ಲಿ 4,529 ತಾತ್ಕಾಲಿಕ ಆಶ್ರಯ ತಾಣಗಳಲ್ಲಿ 4,64,311 ದನಗಳನ್ನು ಇರಿಸಲಾಗಿದ್ದರೆ 5,268 ಗೋಶಾಲೆಗಳಲ್ಲಿ 5,73,417 ಜಾನುವಾರುಗಳಿವೆ.