ತಂದೆ ಕೋವಿಡ್ ಗೆ ಬಲಿಯಾದ ಮರುದಿನವೇ ಕರ್ತವ್ಯಕ್ಕೆ ಹಾಜರಾದ ಪುಣೆಯ ವೈದ್ಯ
ಫೋಟೊ: ANI
ಪುಣೆ,ಮೇ 5: ಇಲ್ಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ದುಡಿಯುತ್ತಿರುವ ವೈದ್ಯರೋರ್ವರು ಕೋವಿಡ್-19ಕ್ಕೆ ತಂದೆ ಬಲಿಯಾದ ಮರುದಿನವೇ,ತಾಯಿ ಮತ್ತು ಸಹೋದರ ಇನ್ನೂ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವಾಗಲೇ ಕೆಲಸಕ್ಕೆ ಹಾಜರಾಗಿ ಕರ್ತವ್ಯಪ್ರಜ್ಞೆಯನ್ನು ಮೆರೆದಿದ್ದಾರೆ.
ರೋಗಿಗಳ ಸೇವೆ ತನ್ನ 85ರ ಹರೆಯದ ತಂದೆಗೆ ಅತ್ಯುತ್ತಮ ಗೌರವವಾಗಿದೆ ಎಂದು ತಾನು ಭಾವಿಸಿರುವುದಾಗಿ ತನ್ನ ಪತ್ನಿಯೊಂದಿಗೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಡಾ.ಮುಕುಂದ ಪೆನುರ್ಕರ್ (45) ಅವರು ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತ ತಿಳಿಸಿದರು.
ಕಳೆದ ವರ್ಷ ಪುಣೆಯಲ್ಲಿ ಕೊರೋನವೈರಸ್ ಪ್ರಕರಣಗಳು ಹೆಚ್ಚಾಗಿದ್ದ ಸಂದರ್ಭದಲ್ಲಿ ತಾನು ಮತ್ತು ತನ್ನ ಪತ್ನಿ ಸಂಜೀವನ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಯಲ್ಲಿ ವ್ಯಸ್ತರಾಗಿದ್ದರಿಂದ ಡಾ.ಪೆನುರ್ಕರ್ ಹೆತ್ತವರನ್ನು ಅವರ ಆರೋಗ್ಯದ ದೃಷ್ಟಿಯಿಂದ ನಾಗ್ಪುರದಲ್ಲಿರುವ ಸೋದರನ ಮನೆಗೆ ಕಳುಹಿಸಿದ್ದರು. ಆದರೆ ಕೊರೋನವೈರಸ್ನ ಎರಡನೇ ಅಲೆಯಲ್ಲಿ ಅವರ ಸೋದರ ಸೋಂಕಿಗೆ ಗುರಿಯಾಗಿದ್ದು,ನಂತರ ಅದು ಹೆತ್ತವರಿಗೂ ಹರಡಿತ್ತು. ಸೋದರನಿಗೆ ಮತ್ತು ಹೆತ್ತವರಿಗೆ ಆಮ್ಲಜನಕ ವ್ಯವಸ್ಥೆಯ ಹಾಸಿಗೆಗಳು ಅಗತ್ಯವಾಗಿದ್ದವು. ಆದರೆ ನಾಗ್ಪುರದಲ್ಲಿ ಅವುಗಳ ಕೊರತೆಯಿಂದಾಗಿ ಡಾ.ಪೆನುರ್ಕರ್ ಅವರನ್ನು ಆ್ಯಂಬುಲನ್ಸ್ನಲ್ಲಿ ಪುಣೆಗೆ ಕರೆಸಿಕೊಂಡು ತನ್ನ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಇತರ ಅನಾರೋಗ್ಯಗಳೂ ಇದ್ದ ಅವರ ತಂದೆ ಎ.26ರಂದು ಮೃತಪಟ್ಟಿದ್ದರು.
ತನ್ನ ಹೆತ್ತವರನ್ನು ಇಲ್ಲಿಗೆ ಕರೆತಂದು ದಾಖಲಿಸಿದಾಗ,ಈ ಸಂಕಷ್ಟದ ಸಮಯದಲ್ಲಿ ರೋಗಿಗಳಿಗೆ ಸೇವೆಯನ್ನು ಮುಂದುವರಿಸುವಂತೆ ತಂದೆ ತನಗೆ ಹೇಳಿದ್ದರು. ಅವರ ನಿಧನದ ಸಂದರ್ಭ ತಾಯಿ ಮತ್ತು ಸೋದರ ಇಬ್ಬರೂ ಚಿಕಿತ್ಸೆಯಲ್ಲಿದ್ದರು. ಆಸ್ಪತ್ರೆಯಲ್ಲಿಯ ಸ್ಥಿತಿಯನ್ನು ಕಣ್ಣಾರೆ ಕಂಡಿದ್ದ ತನ್ನ ತಾಯಿ ರೋಗಿಗಳಿಗೆ ಸೇವೆ ನಿಲ್ಲಿಸದಂತೆ ತನಗೆ ಸೂಚಿಸಿದ್ದರು. ತಾನೊಬ್ಬನೇ ತಂದೆಯ ಅಂತ್ಯಸಂಸ್ಕಾರವನ್ನು ಪೂರೈಸಿ ಮರುದಿನ ಸಂಜೆ ಕರ್ತವ್ಯಕ್ಕೆ ಹಾಜರಾಗಿದ್ದೆ ಎಂದು ಡಾ.ಪೆನುರ್ಕರ್ ತಿಳಿಸಿದರು
‘ದೇವರ ದಯೆಯಿಂದ ನನ್ನ ತಾಯಿ ಮತ್ತು ಸೋದರ ಈಗ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ