ದೇಶದಲ್ಲಿ ಒಂದೇ ದಿನ 4.12 ಲಕ್ಷ ಮಂದಿಗೆ ಕೊರೋನ ಪಾಸಿಟಿವ್

ಹೊಸದಿಲ್ಲಿ: ದೇಶದಲ್ಲಿ ಬುಧವಾರ ಕೋವಿಡ್-19 ಹೊಸ ಪ್ರಕರಣ ಹಾಗೂ ಸೋಂಕಿತರ ಸಾವು ಎರಡರಲ್ಲೂ ಹೊಸ ದಾಖಲೆ ನಿರ್ಮಾಣವಾಗಿದೆ.
ಕಳೆದ 24 ಗಂಟೆಗಳಲ್ಲಿ 4.12 ಲಕ್ಷ ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಇದು ಎ. 30ರಂದು ದಾಖಲಾದ 4,02,351 ಪ್ರಕರಣಗಳಿಗಿಂತ 10 ಸಾವಿರದಷ್ಟು ಅಧಿಕ. ಸಾವಿನ ಸಂಖ್ಯೆ ಕೂಡಾ 4000ದ ಸನಿಹಕ್ಕೆ ಬಂದಿದ್ದು, 3980 ಸೋಂಕಿತರು ಬುಧವಾರ ಕೊನೆಯುಸಿರೆಳೆದಿದ್ದಾರೆ.
ಬುಧವಾರ ದೇಶದಲ್ಲಿ 4,12,784 ಹೊಸ ಪ್ರಕರಣಗಳು ವರದಿಯಾಗಿದ್ದು, ಇದು ವಿಶ್ವದ ಯಾವುದೇ ದೇಶಗಳಲ್ಲಿ ಒಂದೇ ದಿನ ದಾಖಲಾದ ಅತ್ಯಧಿಕ ಸಂಖ್ಯೆಯಾಗಿದೆ. ಕಡಿಮೆ ಸಂಖ್ಯೆಯ ಮಾದರಿಗಳ ಪರೀಕ್ಷೆ ನಡೆಸಿದ್ದರೂ, ಅತ್ಯಧಿಕ ಪ್ರಕರಣಗಳು ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಮುನ್ನ ಗರಿಷ್ಠ ಪ್ರಕರಣ ದಾಖಲಾಗಿದ್ದ ಎ. 30ರಂದು 19.4 ಲಕ್ಷ ಮಂದಿಯ ಪರೀಕ್ಷೆ ನಡೆಸಿದ್ದರೆ, ನಿನ್ನೆ ಕೇವಲ 15.4 ಮಂದಿಯನ್ನಷ್ಟೇ ಪರೀಕ್ಷಿಸಲಾಗಿತ್ತು. ಇದರಿಂದಾಗಿ ಕಳೆದ ಮೂರು ದಿನಗಳಲ್ಲಿ ಧನಾತ್ಮಕತೆ ದರ ಶೇಕಡ 2ರಷ್ಟು ಹೆಚ್ಚಿ ಶೇಕಡ 24.4ನ್ನು ತಲುಪಿದೆ. ಧನಾತ್ಮಕತೆ ದರ ಎಂದರೆ ಒಟ್ಟು ಪರೀಕ್ಷಿಸಿದ ಪ್ರಕರಣಗಳ ಪೈಕಿ ಪಾಸಿಟಿವ್ ಬಂದ ಪ್ರಕರಣಗಳು.
ಸಾವಿನ ಸಂಖ್ಯೆ ನಾಲ್ಕು ಸಾವಿರದ ಸನಿಹಕ್ಕೆ ಬಂದಿದ್ದು, ಐದು ದೊಡ್ಡ ರಾಜ್ಯಗಳಲ್ಲಿ ಇದುವರೆಗಿನ ಗರಿಷ್ಠ ಸಾವು ಬುಧವಾರ ದಾಖಲಾಗಿದೆ. ಮಹಾರಾಷ್ಟ್ರದಲ್ಲಿ ಸಾವಿನ ಸಂಖ್ಯೆ 900ನ್ನು ದಾಟಿದ್ದು, ಒಂದೇ ದಿನ 920 ಮಂದಿ ಬಲಿಯಾಗಿದ್ದಾರೆ. ಉಳಿದಂತೆ ಉತ್ತರ ಪ್ರದೇಶ (357), ಕರ್ನಾಟಕ (346), ಪಂಜಾಬ್ (182), ಹರ್ಯಾಣ (181) ಮತ್ತು ತಮಿಳುನಾಡು (167) ಇದುವರೆಗಿನ ಗರಿಷ್ಠ ಸಂಖ್ಯೆಯನ್ನು ದಾಖಲಿಸಿವೆ.
ಬುಧವಾರ ಒಂದೇ ದಿನ 78 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳು ಹೆಚ್ಚಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 35 ಲಕ್ಷದ ಗಡಿ ದಾಟಿದೆ.
ಕರ್ನಾಟಕದಲ್ಲಿ ಬುಧವಾರ ಪ್ರಕರಣಗಳ ಸಂಖ್ಯೆ 50 ಲಕ್ಷದ ಗಡಿ ದಾಟಿದ್ದು, ಒಂದೇ ದಿನ 50112 ಪ್ರಕರಣಗಳು ವರದಿಯಾಗಿವೆ.
ಮಹಾರಾಷ್ಟ್ರ ಹೊರತುಪಡಿಸಿ, ಒಂದೇ ದಿನ ಅತ್ಯಧಿಕ ಪ್ರಕರಣ ದಾಖಲಾದ ಎರಡನೇ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ. ಮಹಾರಾಷ್ಟ್ರದಲ್ಲಿ 57640 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ. ಒಟ್ಟು 12 ರಾಜ್ಯಗಳಲ್ಲಿ ಬುಧವಾರ ಇದುವರೆಗಿನ ಗರಿಷ್ಠ ಪ್ರಕರಣಗಳು ದಾಖಲಾಗಿವೆ.