ಕೋವಿಡ್-19: ಸೋಂಕು, ಸಾವಿನಲ್ಲೂ ಹಣ ಮಾಡುತ್ತಿರುವ ಸರ್ಕಾರ; ತಜ್ಞರ ಕಳವಳ

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕದ ಅಬ್ಬರ ಹಾಗೂ ಮರಣ ಮೃದಂಗದ ನಡುವೆಯೇ ಕೇಂದ್ರ ಸರ್ಕಾರ ಮಾತ್ರ ರೋಗ ಹಾಗೂ ಸಾವಿನಲ್ಲೂ ಹಣ ಮಾಡುತ್ತಿದೆ ಎಂದು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಈ ಸಂಬಂಧ ಸಂಪರ್ಕಿಸಲಾದ ಪ್ರತಿಯೊಬ್ಬ ತಜ್ಞರು ಕೂಡಾ, ಸರ್ಕಾರದ ಈ ಪ್ರವೃತ್ತಿ ಕೊನೆಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಂದಿಗೂ ಆಮ್ಲಜನಕ ಸಾಂದ್ರಕ ಖರೀದಿಸುವ ಕುಟುಂಬ ಶೇಕಡ 12ರಷ್ಟು ಐಜಿಎಸ್‌ಟಿ ತೆರಿಗೆ ಪಾವತಿಸಬೇಕು. ಮೇ 1ರ ವರೆಗೆ ಇದು ಶೇಕಡ 28ರಷ್ಟಿತ್ತು. ಪರಿಹಾರ ಕ್ರಮವಾಗಿ ಕೇಂದ್ರ ಸರ್ಕಾರ ತೆರಿಗೆ ಇಳಿಸಿತ್ತು. 12 ಶೇಕಡ ಏಕೆ ಪಾವತಿಸಬೇಕು? ಇದು ಶೂನ್ಯ ಏಕಾಗಬಾರದು? ಆಮ್ಲಜನಕ ಯಂತ್ರಗಳನ್ನು ಬಳಸುವವರು ಕೋವಿಡ್-19 ರೋಗಿಗಳು. ಇಷ್ಟಾಗಿಯೂ ಸರ್ಕಾರ ಅವರಿಗೆ ತೆರಿಗೆ ಪಾವತಿಸುವಂತೆ ಸೂಚಿಸುತ್ತಿದೆ. ಏಕೆಂದರೆ ಇದು ಸರ್ಕಾರದ ಆದಾಯ ಹೆಚ್ಚಿಸುತ್ತದೆ. ಆಮ್ಲಜನಕ ಸಾಂದ್ರಕದ ಸಹಾಯದಿಂದ ರೋಗಿಗಳು ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸಬಹುದು. ತೆರಿಗೆ ವಿಧಿಸುವ ಬದಲು ಕಂಗಾಲಾಗಿರುವ ಜನರಿಗೆ ಇಂಥ ಉತ್ತೇಜಕ ನೀಡಬಾರದೇ ಎಂಬ ಪ್ರಶ್ನೆಯನ್ನು ತಜ್ಞರು ಮುಂದಿಡುತ್ತಾರೆ.
ಇದಲ್ಲದೇ ಕೋವಿಡ್ ಸಂಬಂಧಿ ವೈದ್ಯಕೀಯ ಔಷಧಿಗಳಾದ ರೆಮ್‌ಡೆಸಿವರ್ ಅಥವಾ ಇತರ ಔಷಧಿಗಳಿಗೆ, ಪೂರಕ ಮತ್ತು ವೈದ್ಯಕೀಯ ದರ್ಜೆಯ ಆಮ್ಲಜನಕಕ್ಕೆ ಕೂಡಾ ಶೇಕಡ 12ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಜನ ಕಂಗಾಲಾಗಿರುವ ಇಂಥ ಭಯಾನಕ ಸನ್ನಿವೇಶದ ಲಾಭ ಪಡೆದು ಸರ್ಕಾರ ಏಕೆ ಹಣ ಮಾಡುತ್ತಿದೆ ಎಂದು ಜಾಗತಿಕ ತಜ್ಞರು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ.
ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಸಾವಿರಾರು ಕುಟುಂಬಗಳು ಅಸಹಾಯಕ ಸ್ಥಿತಿಯಲ್ಲಿದ್ದು, ದೊಡ್ಡ ಮೊತ್ತದ ವೈದ್ಯಕೀಯ ವೆಚ್ಚದಿಂದ ಕಂಗಾಲಾಗಿದ್ದಾರೆ. ವಿಮಾ ಕಂಪನಿಗಳು ಕೂಡಾ ಈ ಚಿಕಿತ್ಸಾ ವೆಚ್ಚ ಭರಿಸುತ್ತಿಲ್ಲ. ಇಂಥ ಸಂದರ್ಭದಲ್ಲಿ ಕೂಡಾ ಸರ್ಕಾರ ತನ್ನ ’ಲಾಭಕೋರ ನೀತಿ’ ಯನ್ನು ಅನುಸರಿಸುತ್ತಿದೆಯೇ ಎಂದು ವೈದ್ಯಕೀಯ ಜಗತ್ತು ಕಳವಳ ವ್ಯಕ್ತಪಡಿಸುತ್ತಿದೆ. ಕೋವಿಡ್‌ಗೆ ಬಳಸುವ ಎಲ್ಲ ವೈದ್ಯಕೀಯ ಪರಿಕರಗಳ ಮೇಲಿನ ತೆರಿಗೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿವೆ.