ಹೆತ್ತವರು ಕೋವಿಡ್ ಗೆ ಬಲಿಯಾದರೆ ಮಕ್ಕಳನ್ನು ಯಾರಿಗೆ ಹಸ್ತಾಂತರಿಸಬೇಕು?:
ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಪತ್ರ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕೋವಿಡ್ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿರುವ ಹೆತ್ತವರು ಒಂದು ವೇಳೆ ಸೋಂಕಿಗೆ ಬಲಿಯಾದರೆ ಅವರ ಮಕ್ಕಳನ್ನು ಯಾರಿಗೆ ಹಸ್ತಾಂತರಿಸಬೇಕು ಎಂಬ ಕುರಿತು ಹೆತ್ತವರು ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿಯೇ ಅವರಿಂದ ಲಿಖಿತ ಹೇಳಿಕೆ ಪಡೆದುಕೊಳ್ಳಬೇಕೆಂದು ಆಸ್ಪತ್ರೆಗಳಿಗೆ ಸೂಚಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಪತ್ರ ಬರೆದು ಸೂಚಿಸಿದೆ.
ಹೆತ್ತವರು ಕೋವಿಡ್ಗೆ ಬಲಿಯಾದ ನಂತರ ಅವರ ಮಕ್ಕಳ ಜವಾಬ್ದಾರಿಯನ್ನು ತಕ್ಷಣಕ್ಕೆ ವಹಿಸಿಕೊಳ್ಳಲು ಯಾರೂ ಇಲ್ಲದೇ ಇರುವ ಹಲವು ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಇಲಾಖೆಯ ಕಾರ್ಯದರ್ಶಿ ರಾಮ್ ಮೋಹನ್ ಮಿಶ್ರಾ ಅವರು ಈ ಕುರಿತಂತೆ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರಿಗೆ ಪತ್ರ ಬರೆದಿದ್ದಾರೆ.
"ಒಂದು ವೇಳೆ ಸಾವು ಸಂಭವಿಸಿದಲ್ಲಿ ಮಕ್ಕಳನ್ನು ಯಾವ ನಂಬಿಕಸ್ಥ ಸಂಬಂಧಿಕರು ಅಥವಾ ಸ್ನೇಹಿತರಿಗೆ ಹಸ್ತಾಂತರಿಸಬೇಕೆಂದು ಹೆತ್ತವರ ಆಸ್ಪತ್ರೆ ದಾಖಲಾತಿ ಫಾರ್ಮ್ ನಲ್ಲಿಯೇ ನಮೂದಿಸುವಂತೆ ಮಾಡಬೇಕು" ಎಂದು ಪತ್ರದಲ್ಲಿ ತಿಳಿಸಲಾಗಿದೆಯಲ್ಲದೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇಂತಹ ಒಂದು ಸಲಹೆ ನೀಡಲಾಗಿದೆ ಎಂದು ವಿವರಿಸಲಾಗಿದೆ.
ಕೋವಿಡ್ಗೆ ಹೆತ್ತವರು ಬಲಿಯಾದ ನಂತರ ಅನಾಥ ಮಕ್ಕಳು ದತ್ತು ಪಡೆಯಲು ಲಭ್ಯ ಎಂಬರ್ಥದ ಹಲವು ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಪೋಸ್ಟ್ ಮಾಡಿ ಇಂತಹ ಪ್ರಕರಣಗಳಲ್ಲಿ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಗೆ ತಿಳಿಸುವುದು ಎಲ್ಲರ ಕರ್ತವ್ಯ ಎಂದು ಬರೆದಿದ್ದಾರೆ.
ಕೋವಿಡ್ಗೆ ಹೆತ್ತವರನ್ನು ಕಳೆದುಕೊಂಡ ಮಕ್ಕಳ ಪುನರ್ವಸತಿಗೆ ಬಾಲನ್ಯಾಯ ಕಾಯಿದೆಯ ನಿಬಂಧನೆಗಳನ್ವಯ ಸೂಕ್ತ ಕ್ರಮ ಕೈಗೊಳ್ಳುವಂತೆ ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಎಲ್ಲಾ ರಾಜ್ಯ ಸರಕಾರಗಳಿಗೆ ಪತ್ರ ಬರೆದಿದ್ದಾರೆ.