ಶಿವಮೊಗ್ಗ ಜಿಲ್ಲಾಸ್ಪತ್ರೆ ಮುಂಭಾಗ ''ಆಕ್ಸಿಜನ್ ಬೆಡ್ ಖಾಲಿ ಇಲ್ಲ, ದಯವಿಟ್ಟು ಸಹಕರಿಸಿ'' ನಾಮಫಲಕ
ಮುಖ್ಯಮಂತ್ರಿಯ ತವರು ಜಿಲ್ಲೆಯಲ್ಲಿ ಆಕ್ಸಿಜನ್ ಹಾಸಿಗೆಗೆ ಅಭಾವ

ಶಿವಮೊಗ್ಗ, ಮೇ 6: ಮುಖ್ಯಮಂತ್ರಿ ಯಡಿಯೂರಪ್ಪನವರ ತವರು ಜಿಲ್ಲೆಯ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್‌ಗಳ ಅಭಾವ ಉಂಟಾಗಿದೆ. ಜಿಲ್ಲಾಸ್ಪತ್ರೆ ಮುಂಭಾಗವೇ 'ಆಕ್ಸಿಜನ್ ಬೆಡ್ ಖಾಲಿ ಇಲ್ಲ. ದಯವಿಟ್ಟು ಸಹಕರಿಸಿ' ಎಂದು ಬೋರ್ಡ್(ನಾಮಫಲಕ) ಹಾಕಲಾಗಿದೆ.
ಒಂದೆಡೆ ಆಕ್ಸಿಜನ್ ಕೊರತೆಯ ಭೀತಿ ಇದ್ದು, ಈ ನಡುವೆಯೇ ಮೆಗ್ಗಾನ್ ಆಸ್ಪತ್ರೆ ಮುಂಭಾಗ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಬೆಡ್ ಇಲ್ಲ ಎಂದು ಬೋರ್ಡ್ ಹಾಕಲಾಗಿದೆ. ಉಸಿರಾಟದ ಸಮಸ್ಯೆ ಮತ್ತು ಆಕ್ಸಿಜನ್ ತುರ್ತು ಅಗತ್ಯವಿರುವ ಕೋವಿಡ್ ಸೋಂಕಿತರಿಗೆ ಬೆಡ್ ಸಿಗದೆ ಪರಿತಪಿಸುವಂತಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ 400 ಆಕ್ಸಿಜನ್ ಬೆಡ್‌ಗಳಿವೆ. ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುದರಿಂದ ಬೆಡ್‌ಗಳು ಭರ್ತಿಯಾಗಿದ್ದು, ಆತಂಕ ಮೂಡಿಸಿದೆ.
ಜಿಲ್ಲೆಯಲ್ಲಿ ಬೆಡ್ ಸಮಸ್ಯೆ ಇಲ್ಲ ಎಂದು ಜಿಲ್ಲಾಡಳಿತ, ಜಿಲ್ಲಾ ಉಸ್ತವಾರಿ ಸಚಿವ ಕೆ.ಎಸ್ ಈಶ್ವರಪ್ಪನವರು ಹೇಳುತ್ತಿದ್ದರು. ಆದರೆ ಆಕ್ಸಿಜನ್ ಬೆಡ್ ಕೊರತೆ ಎಂದು ಆಸ್ಪತ್ರೆ ಮುಂದೆ ಬೋರ್ಡ್ ಹಾಕಿರುವುದು ಸೋಂಕಿತರಲ್ಲಿ ಆತಂಕ ಮೂಡಿಸಿದೆ.
ಶಿವಮೊಗ್ಗ ಮಾತ್ರವಲ್ಲದೇ ಮೆಗ್ಗಾನ್ ಗೆ ನೆರೆಯ ಜಿಲ್ಲೆಗಳಾದ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ಹಾವೇರಿಯಿಂದಲೂ ಜನ ಚಿಕಿತ್ಸೆಗಾಗಿ ಆಗಮಿಸುತ್ತಿದ್ದಾರೆ. ಆದರೆ, ಈಗ ಆಕ್ಸಿಜನ್ ಬೆಡ್ ಲಭ್ಯವಿಲ್ಲದ ವಿಚಾರ ಸೋಂಕಿತರನ್ನು ಆತಂಕಕ್ಕೀಡು ಮಾಡಿದೆ.
ಈ ಬಗ್ಗೆ ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕ ಡಾ.ಶ್ರೀಧರ್ ಪ್ರತಿಕ್ರಿಯಿಸಿ, ಆಕ್ಸಿಜನ್ ಪ್ರಮಾಣಕ್ಕೆ ತಕ್ಕಂತೆ ಬೆಡ್‌ಗಳನ್ನು ವ್ಯವಸ್ಥೆ ಮಾಡಿಕೊಂಡಿದ್ದೇವೆ. ಅದಕ್ಕಿಂತಲೂ ಹೆಚ್ಚು ಬೆಡ್ ವ್ಯವಸ್ಥೆ ಮಾಡಿ, ಬಳಿಕ ಆಕ್ಸಿಜನ್ ಇಲ್ಲದೆ ಸೋಂಕಿತರು ನರಳುವುದು ಬೇಡ. ಸಂಜೆ ವೇಳೆಗೆ ಹೆಚ್ಚುವರಿ ಆಕ್ಸಿಜನ್ ಬಳಿಕ ಉಳಿದ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.







