ಬೆಡ್ ಕೊಡಿ ಎಂದು ಸಿಎಂ ನಿವಾಸದ ಮುಂದೆ ಮಹಿಳೆ ಪ್ರತಿಭಟನೆ: ಆಸ್ಪತ್ರೆ ತಲುಪುವ ಮುನ್ನವೇ ಸೋಂಕಿತ ಪತಿ ಸಾವು

ಬೆಂಗಳೂರು, ಮೇ 6: ಕೊರೋನ ಸೋಂಕಿತ ಪತಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸದ ಬಳಿಯೇ ಅವರ ಪತ್ನಿ ಪ್ರತಿಭಟನೆ ಮಾಡಿದ್ದು, ಬಳಿಕ ಹಾಸಿಗೆ ಸಿಕ್ಕರೂ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ವ್ಯಕ್ತಿ ಸಾವನ್ನಪ್ಪಿದ ದಾರುಣ ಘಟನೆ ನಗರದಲ್ಲಿ ಗುರುವಾರ ನಡೆಸಿದೆ.
ಮೃತಪಟ್ಟ ವ್ಯಕ್ತಿಯನ್ನು ರಾಮೋಹಳ್ಳಿ ನಿವಾಸಿ ಸತೀಶ್(45) ಎಂದು ಗುರುತಿಸಲಾಗಿದೆ. ಇವರಿಗೆ ಸೋಂಕು ಕಾಣಿಸಿಕೊಂಡಿದ್ದು ಹೋಮ್ ಐಸೋಲೇಷನ್ ನಲ್ಲಿದ್ದರು. ಆದರೆ, ಅವರಿಗೆ ನಿನ್ನೆ ರಾತ್ರಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ಮಧ್ಯರಾತ್ರಿ 1 ಗಂಟೆಯಿಂದ ಕುಟುಂಬಸ್ಥರು ವಿವಿಧ ಆಸ್ಪತ್ರೆಗಳಿಗೆ ಹೋದರೂ ಅವರಿಗೆ ಹಾಸಿಗೆ ವ್ಯವಸ್ಥೆ ಆಗಿರಲಿಲ್ಲ. ಆ ಹಿನ್ನೆಲೆಯಲ್ಲಿ ಮನನೊಂದು ಸತೀಶ್ ಪತ್ನಿ ಮಂಜುಳಾ ಹಾಗೂ ಕುಟುಂಬದ ಸದಸ್ಯರು ಕೊನೆಗೆ ಸಿಎಂ ನಿವಾಸ ಕಾವೇರಿ ಬಳಿಗೆ ಬಂದಿದ್ದಾರೆ.
ಈ ವೇಳೆ ಸೋಂಕಿತ ವ್ಯಕ್ತಿ ಸಹಿತ ಕುಟುಂಬಸ್ಥರನ್ನು ಸಾಗ ಹಾಕಲು ಪೊಲೀಸರು ಮುಂದಾಗಿದ್ದಾರೆ. ಬೆಡ್ ಸಿಗದ ಹೊರತು ಇಲ್ಲಿಂದ ಹೋಗಲ್ಲ ಎಂದು ರೋಗಿ ಸಂಬಂಧಿಕರು ಪಟ್ಟು ಹಿಡಿದಿದ್ದಾರೆ.
ಈ ವೇಳೆ ಮಾಧ್ಯಮದವರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಹಾಸಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸೋಂಕಿತ ವ್ಯಕ್ತಿ ಅಸುನೀಗಿದ್ದಾರೆ ಎಂದು ಗೊತ್ತಾಗಿದೆ.
ಮಹಿಳೆ ಮತ್ತು ಕುಟುಂಬಸ್ಥರು ಸಿಎಂ ನಿವಾಸದ ಮುಂದೆ ಬೆಡ್‌ಗಾಗಿ ಅಂಗಲಾಚುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.







