ಕೋವಿಡ್ ರೋಗ ಲಕ್ಷಣವಿದ್ದಲ್ಲಿ ಮಾತ್ರವೇ ಟೆಸ್ಟ್ : ಸರಕಾರಿ ತಪಾಸಣಾ ಕೇಂದ್ರಗಳಲ್ಲಿ ಹೊಸ ವ್ಯವಸ್ಥೆ
ಮಂಗಳೂರು, ಮೇ 6: ಈಗಾಗಲೇ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಮೇಲಿನ ಒತ್ತಡವನ್ನು ತಪ್ಪಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲೆಯ ಸರಕಾರಿ ಕೋವಿಡ್ ತಪಾಸಣಾ ಕೇಂದ್ರಗಳಲ್ಲಿ ರೋಗ ಲಕ್ಷಣವಿದ್ದಲ್ಲಿ ಮಾತ್ರವೇ ಆರ್‌ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತಿದೆ.
ಮೇ 1ರಿಂದ ಈ ವ್ಯವಸ್ಥೆಯನ್ನು ಜಿಲ್ಲೆಯ ಎಲ್ಲಾ ಸರಕಾರಿ ತಪಾಸಣಾ ಕೇಂದ್ರಗಳಲ್ಲಿ ಈ ವ್ಯವಸ್ಥೆಯನ್ನು ಮಾಡಲಾಗಿದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕ ಇದ್ದವರಾಗಿದ್ದರೂ ರೋಗ ಲಕ್ಷಣ ಇದ್ದಾಗ ಮಾತ್ರವೇ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಕೋವಿಡ್ ಭಯದಿಂದ ತಪಾಸಣೆಗಾಗಿ ಕೇಂದ್ರಗಳಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದ ವರದಿಯೂ ವಿಳಂಬವಾಗುತ್ತಿದೆ. ಇದರಿಂದ ಕೋವಿಡ್ ಟೆಸ್ಟ್ ಲ್ಯಾಬ್‌ನಲ್ಲಿ ಲೋಡ್ ಕೂಡಾ ಹೆಚ್ಚಾಗುತ್ತಿದೆ. ಟೆಸ್ಟ್ ಕಿಟ್ ಕೊರತೆಯಿಲ್ಲದಿದ್ದರೂ ಅರ್ಹರಿಗೆ ಚಿಕಿತ್ಸೆ ವಿಳಂಬವಾಗಬಾರದು ಎಂಬ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಗ್ಯಾಧಿಕಾರಿಗಳು ಅಭಿಪ್ರಾಯಿಸಿದ್ದಾರೆ.
ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ವೆನ್‌ಲಾಕ್ ಮೊದಲಾದ ಸರಕಾರಿ ಕೋವಿಡ್ ತಪಾಸಣಾ ಕೇಂದ್ರಗಳಲ್ಲಿ ಆಗಮಿಸುವವರನ್ನು ಕೆಮ್ಮು, ತಲೆನೋವು, ಮೈಕೈನೋವು ಇದೆಯೇ ಎಂಬುದನ್ನು ವೈದ್ಯರು ಮೊದಲು ಪರೀಕ್ಷಿಸುತ್ತಾರೆ. ರೋಗ ಲಕ್ಷಣ ಇದ್ದರೆ ಮಾತ್ರವೇ ಕೋವಿಡ್ ತಪಸಾಣಾ ಕೊಠಡಿಗೆ ಕಳುಹಿಸಲಾಗುತ್ತದೆ.
ಜಿಲ್ಲೆಯಲ್ಲಿ ಸದ್ಯ 1 ಲಕ್ಷ ಆರ್‌ಟಿಪಿಸಿಆರ್ ಟೆಸ್ಟ್ ಕಿಟ್ ಲಭ್ಯವಿದೆ. ದಿನಕ್ಕೆ 4500ರಷ್ಟು ಕೋವಿಡ್ ಪರೀಕ್ಷೆಯನ್ನು ಮಾಡಲಾಗುತ್ತಿದೆ. ವಿಮಾನ ಪ್ರಯಾಣಿಕರು ಈ ಪರೀಕ್ಷೆಯಲ್ಲಿ ಅತೀ ಹೆಚ್ಚು ಮಂದಿ. ಕೊರೋನ ಪ್ರಥಮ ಅಲೆಯ ಸಂದರ್ಭ ದಿನಕ್ಕೆ 1500ರಿಂದ 2000ದವರೆಗೆ ಆರ್‌ಟಿಪಿಸಿಆರ್ ಟೆಸ್ಟ್ ನಡೆಸಲಾಗುತ್ತಿತ್ತು. ಪ್ರಸ್ತುತ 8 ಖಾಸಗಿ ಲ್ಯಾಬ್‌ಗಳು ಹಾಗೂ ವೆನ್‌ಲಾಕ್‌ನಲ್ಲಿ ಸದ್ಯ ಮೂರು ಸ್ವಾಬ್ ಪರೀಕ್ಷಾ ಯಂತ್ರ ಗಳು ಕಾರ್ಯ ನಿರ್ವಹಿಸುತ್ತಿವೆ.
ರೋಗಲಕ್ಷಣವಿದ್ದರೆ ಮಾತ್ರ ಟೆಸ್ಟ್ ಮಾಡಿಸಿ
‘‘ಅಗತ್ಯವಿಲ್ಲದಿರುವಾಗ ಕೋವಿಡ್ ರ್ಯಾಂಡಮ್ ಪರೀಕ್ಷೆ ನಡೆಸಿ ಪ್ರಯೋಜನವಿಲ್ಲ. ಕೊರೋನ ಸೋಂಕಿತರ ಪ್ರಾಥಮಿಕ ಸಂಪರ್ಕವಿದ್ದರೂ ರೋಗ ಲಕ್ಷಣಗಳಿದ್ದಾಗ ಮಾತ್ರ ಆರ್‌ಟಿಸಿಪಿಆರ್ ಟೆಸ್ಟ್ ಮಾಡಲಾಗುತ್ತಿದೆ. ಹಾಗಾಗಿ ಜನರು ರೋಗ ಲಕ್ಷಣವಿದ್ದಾಗ ಮಾತ್ರವೇ ಟೆಸ್ಟ್ ಮಾಡಿಸಿಕೊಳ್ಳಬೇಕು.
- ಡಾ. ಕಿಶೋರ್ ಕುಮಾರ್, ಡಿಎಚ್‌ಒ, ಮಂಗಳೂರು.







