ಬ್ರಹ್ಮಾವರ: ಸಿಡಿಲು ಬಡಿದು 2 ಜಾನುವಾರು ಸಾವು
ಉಡುಪಿ, ಮೇ 6: ಬುಧವಾರ ಸಂಜೆ ಗಾಳಿ-ಮಳೆಯೊಂದಿಗೆ ಸಿಡಿಲು ಬಡಿದು ಬ್ರಹ್ಮಾವರ ತಾಲೂಕಿನಲ್ಲಿ ಎರಡು ಜಾನುವಾರುಗಳು ಸಾವನ್ನಪ್ಪಿದವಲ್ಲದೇ, ಹಲವು ಮನೆಗಳಿಗೆ ಅಪಾರ ಹಾನಿ ಸಂಭವಿಸಿರುವ ವರದಿಗಳು ಬಂದಿವೆ.
34 ಕುದಿ ಗ್ರಾಮದಲ್ಲಿ ಶ್ರೀಧರ ಭಟ್ ಎಂಬವರ ಮನೆ ಕೊಟ್ಟಿಗೆಗೆ ಸಿಡಿಲು ಬಡಿದು ಜಾನುವಾರು ಮೃತಪಟ್ಟಿದೆ. ಅದೇ ರೀತಿ ಹಾವಂಜೆ ಗ್ರಾಮದ ರಾಜೀವ ಶೆಟ್ಟಿ ಎಂಬವರಿಗೆ ಸೇರಿದ ಜಾನುವಾರು ಸಹ ಸಿಡಿದು ಬಡಿದು ಮೃತಪಟ್ಟಿದೆ. ಇದರಿಂದ ತಲಾ 30,000ರೂ.ನಷ್ಟದ ಅಂದಾಜು ಮಾಡಲಾಗಿದೆ.
80 ಬಡಗುಬೆಟ್ಟು ಗ್ರಾಮದ ಸಂದೀಪ ಎಂಬವರ ಮನೆಗೆ ನಿನ್ನೆ ಸಂಜೆ ಸಿಡಿಲು ಬಡಿದು ಮನೆಯ ವಿದ್ಯುತ್ ಉಪಕರಣಗಳೆಲ್ಲವೂ ಹಾನಿ ಗೊಂಡಿವೆ. ಸುಮಾರು 50,000ರೂ. ನಷ್ಟದ ಅಂದಾಜು ಮಾಡಲಾಗಿದೆ. 34 ಕುದಿ ಗ್ರಾಮದ ಕೃಷ್ಣ ನಾಯ್ಕ ಎಂಬವರ ಪಕ್ಕಾದ ವಾಸ್ತವ್ಯದ ಮನೆಗೂ ಸಿಡಿಲು ಬಡಿದಿದ್ದು ಅಪಾರ ಹಾನಿಯಾಗಿದೆ.
ಕಾರ್ಕಳ ತಾಲೂಕು ಕುಕ್ಕುಜೆ ಗ್ರಾಮದ ಜನಾರ್ದನ ಆಚಾರಿ ಎಂಬವರ ವಾಸ್ತವ್ಯದ ಮನೆ ಗಾಳಿ-ಮಳೆಗೆ ಭಾಗಶ: ಹಾನಿಯಾಗಿದ್ದರೆ, ಮರ್ಣೆ ಗ್ರಾಮದ ರಾಘು ನಾಯ್ಕರ ಮನೆ ಸಿಡಿಲು ಬಡಿದು ಭಾಗಶ: ಹಾನಿಯಾಗಿದ್ದು ತಲಾ 40,000ರೂ.ನಷ್ಟವಾಗಿದೆ.
ತಾಲೂಕಿನ ಮುಡಾರು ಗ್ರಾಮದ ಲಲಿತ, ಶಿರ್ಲಾಲು ಗ್ರಾಮದ ಗಣಪತಿ ಪ್ರಭು, ಕಾಪು ತಾಲೂಕು ಬೆಳ್ಳೆ ಗ್ರಾಮದ ಗಣೇಶ್‌ಎಂಬವರ ಮನೆಗೆ ಗಾಳಿ-ಮಳೆಯಿಂದ ಭಾಗಶ: ಹಾನಿಯಾಗಿದ್ದು ಸುಮಾರು 80,000ರೂ.ಗಳ ಒಟ್ಟು ನಷ್ಟದ ಅಂದಾಜು ಮಾಡಲಾಗಿದೆ.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಕಳೆದ 24ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 14.5ಮಿ.ಮೀ.ಮಳೆಯಾಗಿದೆ. ಉಡುಪಿಯಲ್ಲಿ 24, ಕಾರ್ಕಳದಲ್ಲಿ 27, ಹೆಬ್ರಿಯಲ್ಲಿ 25, ಬ್ರಹ್ಮಾವರದಲ್ಲಿ 17 ಹಾಗೂ ಕಾಪು, ಕುಂದಾಪುರ ಮತ್ತು ಬೈಂದೂರುಗಳಲ್ಲಿ ತಲಾ 4ಮಿ.ಮೀ. ಮಳೆಯಾದ ವರದಿಗಳು ಬಂದಿವೆ.







