ಮುಂಬೈ: 21.30 ಕೋಟಿ ರೂ.ಮೌಲ್ಯದ ಯುರೇನಿಯಂ ಸಹಿತ ಇಬ್ಬರ ಸೆರೆ

ಮುಂಬೈ,ಮೇ 6: ಇಬ್ಬರು ವ್ಯಕ್ತಿಗಳನ್ನು ಇಲ್ಲಿ ಬಂಧಿಸಿರುವ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ವು ಅವರ ಬಳಿಯಿಂದ ಏಳು ಕೆ.ಜಿ.ತೂಕದ 21.30 ಕೋ.ರೂ.ವೌಲ್ಯದ ಯುರೇನಿಯಂ ಅನ್ನು ವಶಪಡಿಸಿಕೊಂಡಿದೆ. ಅತ್ಯಂತ ಸ್ಫೋಟಕ ಮತ್ತು ವಿಕಿರಣಶೀಲವಾಗಿರುವ ಈ ಯುರೇನಿಯಂ ಅನ್ನು ಆರೋಪಿಗಳು ಶುದ್ಧತೆಗಾಗಿ ಖಾಸಗಿ ಲ್ಯಾಬ್ನಲ್ಲಿ ಪರೀಕ್ಷೆಯನ್ನು ಮಾಡಿಸಿದ್ದು, ಸದ್ಯ ಪೊಲೀಸರ ತನಿಖೆಗೆ ಗುರಿಯಾಗಿದೆ.
ಯುರೇನಿಯಂ ತಪ್ಪು ಕೈಗಳಿಗೆ ಸಿಕ್ಕರೆ ಅತ್ಯಂತ ಮಾರಣಾಂತಿಕವಾಗಬಲ್ಲದು. ಮುಂಬೈನ ಭಾಭಾ ಅಟಾಮಿಕ್ ರೀಸರ್ಚ್ ಸೆಂಟರ್(ಬಿಎಆರ್ಸಿ)ನ ಅಧಿಕಾರಿಯೋರ್ವರ ದೂರಿನ ಮೇರೆಗೆ ಅಣುಶಕ್ತಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು,ತನಿಖೆ ಪ್ರಗತಿಯಲ್ಲಿದೆ.
ಥಾಣೆಯ ನಿವಾಸಿ ಜಿಗರ್ ಪಾಂಡ್ಯ ಎಂಬಾತ ಯುರೇನಿಯಂ ತುಣುಕುಗಳನ್ನು ಅಕ್ರಮವಾಗಿ ಮಾರಾಟ ಮಾಡುವ ಹವಣಿಕೆಯಲ್ಲಿದ್ದಾನೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಭಾಲೇಕರ್ ಅವರಿಗೆ ಲಭಿಸಿದ್ದ ಮಾಹಿತಿಯ ಮೇರೆಗೆ ಎಟಿಎಸ್ ಆತನ ಬಂಧನಕ್ಕಾಗಿ ಬಲೆ ಹೆಣೆದಿತ್ತು. ಆತನಿಗೆ ಯುರೇನಿಯಂ ನೀಡಿದ್ದ ಮಾಂಖುರ್ದ್ ನಿವಾಸಿ ಅಬು ತಾಹಿರ್ ಎಂಬಾತನನ್ನೂ ಬಂಧಿಸಲಾಗಿದೆ.
ವಶಪಡಿಸಿಕೊಳ್ಳಲಾದ ಯುರೇನಿಯಂ ಅನ್ನು ವಿಶ್ಲೇಷಣೆಗಾಗಿ ಬಿಎಆರ್ಸಿಗೆ ಕಳುಹಿಸಲಾಗಿತ್ತು. ಇದು ನೈಸರ್ಗಿಕ ಯುರೇನಿಯಂ ಆಗಿದ್ದು, ಅತ್ಯಂತ ವಿಕಿರಣ ಶೀಲವಾಗಿದೆ ಮತ್ತು ಮಾನವ ಜೀವಕ್ಕೆ ಅಪಾಯಕಾರಿಯಾಗಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.







