ಕೋವಿಡ್ ರೋಗಿಗಳ ಚಿಕಿತ್ಸೆ: ಖಾಸಗಿ ಆರೋಗ್ಯ ಸೇವೆ ಪ್ಯಾಕೇಜ್ ದರ ಪರಿಷ್ಕರಿಸಿದ ರಾಜ್ಯ ಸರಕಾರ

ಬೆಂಗಳೂರು, ಮೇ 6: ಸಾರ್ವಜನಿಕ ಆರೋಗ್ಯ ಸಂಸ್ಥೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರದಿಂದ ಸೂಚಿತ ಮಾಡಿದ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಖಾಸಗಿ ಆರೋಗ್ಯ ಸೇವೆಗೆ ನೀಡುತ್ತಿರುವ ಪ್ಯಾಕೇಜ್ ದರಗಳನ್ನು ಪರಿಷ್ಕರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಪಿಪಿಇ ಹಾಗೂ ಪರಿಕರಗಳನ್ನು ಒಳಗೊಂಡಂತೆ ದರಗಳನ್ನು ನಿಗದಿ ಮಾಡಲಾಗಿದೆ. ಸಾರ್ವಜನಿಕ ಆರೋಗ್ಯ ಪ್ರಾಧಿಕಾರದಿಂದ ಶಿಫಾರಸ್ಸಾಗಿರುವ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ದಿನವೊಂದಕ್ಕೆ ಈ ಕೆಳಕಂಡ ಪ್ಯಾಕೇಜ್ ದರಗಳು ಅಧಿಸೂಚನೆಯ ದಿನಾಂಕದಿಂದ ಜಾರಿಗೊಳ್ಳುತ್ತವೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.
ಜನರಲ್ ವಾರ್ಡ್ 5200 ರೂ., ಎಚ್‍ಡಿಯು 8 ಸಾವಿರ ರೂ., ಐಸೋಲೇಷನ್ ಐಸಿಯು ವೆಂಟಿಲೇಟರ್ ರಹಿತ 9750 ರೂ., ಐಸೋಲೇಷನ್ ಐಸಿಯು ವೆಂಟಿಲೇಟರ್ ಸಹಿತ 11,500 ರೂ.ನಿಗದಿಪಡಿಸಲಾಗಿದೆ. ಈ ಆದೇಶವನ್ನು ಪಾಲಿಸದಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಶಿಕ್ಷಾರ್ಹವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.





