ದ.ಕ. ಜಿಲ್ಲೆ: ಕೊರೋನ ಸೋಂಕಿಗೆ ಮತ್ತೆ ಐದು ಮಂದಿ ಬಲಿ; 1,191 ಮಂದಿಗೆ ಪಾಸಿಟಿವ್

ಮಂಗಳೂರು, ಮೇ 6: ದ.ಕ. ಜಿಲ್ಲೆಯಲ್ಲಿ ಇದೀಗ ಕೊರೋನ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗುರುವಾರ ಐದು ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 773ಕ್ಕೇರಿದೆ. ಮೃತಪಟ್ಟವರಲ್ಲಿ ಬಂಟ್ವಾಳದ ನಾಲ್ಕು ಮಂದಿ ಮತ್ತು ಮಂಗಳೂರಿನ ಒಬ್ಬರು ಸೇರಿದ್ದಾರೆ. ಇದರಲ್ಲಿ ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರಾಗಿದ್ದಾರೆ.
ಗುರುವಾರ ಜಿಲ್ಲೆಯಲ್ಲಿ 1,191 ಮಂದಿಗೆ ಕೊರೋನ ಸೋಂಕು ದೃಢಪಟ್ಟಿವೆ. ಅಲ್ಲದೆ ಕೊರೋನ ಸೋಂಕಿನಿಂದ ಗುಣಮುಖರಾದ 271 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅಲ್ಲದೆ 10,246 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯ ಏಳು ಕಡೆಗಳಲ್ಲಿ ಕಂಟೈನ್ಮೆಂಟ್ ವಲಯ: ದ.ಕ. ಜಿಲ್ಲೆಯಲ್ಲಿ ಕಂಟೈನ್ಮೆಂಟ್ ವಲಯಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಕಳೆದ ಎರಡು ದಿನಗಳಲ್ಲಿ 16 ಕಂಟೈನ್ಮೆಂಟ್ ವಲಯ ಘೋಷಿಸಲಾಗಿದೆ. ಗುರುವಾರ ಏಳು ಕಡೆಯಲ್ಲಿ ಕಂಟೈನ್ಮೆಂಟ್ ವಲಯ ಘೋಷಣೆ ಮಾಡಲಾಗಿದೆ.
ಪಾಣೆ ಮಂಗಳೂರಿನ ಜೈನರ ಪೇಟೆಯ 1 ಮನೆಯಲ್ಲಿ 8 ಮಂದಿಗೆ, ಬಂಟ್ವಾಳದ ಬಿ ಮೂಡದ 1 ಮನೆಯಲ್ಲಿ 5 , ಸಜಿಪನಡು 1 ಮನೆಯಲ್ಲಿ 7, ಬಾಳೆಪುಣಿಯ 1 ಮನೆಯಲ್ಲಿ 5, ಮೂಳೂರುಗುತ್ತು ಬಾಳೆಪುಣಿಯ 1 ಮನೆಯಲ್ಲಿ 5, ವಿಟ್ಲದ ಕೊಜಪಾಡಿಯ ಮನೆಯಲ್ಲಿ 7, ಬಂಟ್ವಾಳದ ಮಂಗಿಲಪದವಿನ 1 ಮನೆಯಲ್ಲಿ 6 ಮಂದಿಗೆ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್ ವಲಯ ಘೋಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







