ದಿಲ್ಲಿ ಪೊಲೀಸರಿಂದ ಬಿಹಾರ,ಜಾರ್ಖಂಡ್ ಗಳಲ್ಲಿ ಆಮ್ಲಜನಕ, ಔಷಧಿಗಳ ಅಕ್ರಮ ದಾಸ್ತಾನುಕೋರರ ಮೇಲೆ ದಾಳಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಮೇ 6: ಹೆಚ್ಚುತ್ತಿರುವ ಕೊರೋನವೈರಸ್ ಪ್ರಕರಣಗಳ ನಡುವೆಯೇ ದಿಲ್ಲಿ ಪೊಲೀಸರು ಎ.13ರಿಂದ ಮೇ 5ರ ನಡುವಿನ ಅವಧಿಯಲ್ಲಿ ಔಷಧಿಗಳು,ವೈದ್ಯಕೀಯ ಆಮ್ಲಜನಕ ಸಿಲಿಂಡರ್ಗಳು ಮತ್ತು ಅತ್ಯಂತ ಮುಖ್ಯ ಚುಚ್ಚುಮದ್ದುಗಳ ಅಕ್ರಮ ದಾಸ್ತಾನಿನ ಕನಿಷ್ಠ 303 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 144 ಕಾಳಸಂತೆಕೋರರನ್ನು ಬಂಧಿಸಲಾಗಿದ್ದು,ರೆಮ್ಡೆಸಿವಿರ್ ಚುಚ್ಚುಮದ್ದಿನ 451 ವಯಲ್ಗಳು,242 ಆಮ್ಲಜನಕ ಸಿಲಿಂಡರ್ಗಳು ಮತ್ತು 285 ಆಮ್ಲಜನಕ ಸಾಂದ್ರಕಗಳು ಹಾಗೂ ಇತರ ಮಹತ್ವದ ವೈದ್ಯಕೀಯ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಿಲ್ಲಿ ಪೊಲೀಸ್ ಆಯುಕ್ತ ಎಸ್.ಎನ್.ಶ್ರೀವಾಸ್ತವ ಅವರು ವೈದ್ಯಕೀಯ ಅಗತ್ಯಗಳ ಕಾಳಸಂತೆಕೋರರನ್ನು ಮಟ್ಟಹಾಕುವ ನಿಟ್ಟಿನಲ್ಲಿ ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳ ಕೆಲವೆಡೆಗಳಲ್ಲಿ ದಾಳಿಗಳನ್ನು ನಡೆಸಲು ಬುಧವಾರ ಆ ರಾಜ್ಯಗಳ ಪೊಲೀಸ್ ಮುಖ್ಯಸ್ಥರೊಂದಿಗೆ ಮಾತನಾಡಿ ಸಹಕಾರವನ್ನು ಕೋರಿದ್ದು,ಗುರುವಾರ ಅವೆರಡೂ ರಾಜ್ಯಗಳಲ್ಲಿ ದಾಳಿಗಳನ್ನು ಕೈಗೊಳ್ಳಲಾಗಿದೆ.
ಅಗತ್ಯ ಔಷಧಿಗಳ ಪೂರೈಕೆಯ ಸುಳ್ಳು ಭರವಸೆ ಮತ್ತು ನಕಲಿ ವೆಬ್ಸೈಟ್ಗಳ ಸ್ಥಾಪನೆ ಆರೋಪಗಳಲ್ಲಿ 225 ವಂಚನೆ ಪ್ರಕರಣಗಳನ್ನು ಹಾಗೂ ಕಾಳಸಂತೆ ಮತ್ತು ಅಕ್ರಮ ದಾಸ್ತಾನು ಆರೋಪಗಳಲ್ಲಿ 78 ಪ್ರಕರಣಗಳನ್ನು ದಿಲ್ಲಿ ಪೊಲೀಸರು ದಾಖಲಿಸಿಕೊಂಡಿದ್ದಾರೆ. ರೋಗಿಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು ಒಂದು ಲ.ರೂ.ವರೆಗೆ ಹಣ ಪೀಕುತ್ತಿದ್ದ ಮೂರು ಆ್ಯಂಬುಲನ್ಸ್ಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಫಾವಿಪಿರವಿರ್ ಮಾತ್ರೆಗಳು,ಆಕ್ಸಿಜನ್ ಪಂಪ್ಗಳು ಮತ್ತು ಫ್ಲೂ ರೆಗ್ಯುಲೇಟರ್ಗಳು ಸೇರಿದಂತೆ ಒಟ್ಟು 2,822 ವೈದ್ಯಕೀಯ ಸಾಧನಗಳನ್ನು ದಾಳಿಗಳ ಸಂದರ್ಭ ವಶಪಡಿಸಿಕೊಳ್ಳಲಾಗಿದೆ.
ಅಕ್ರಮಗಳಿಗೆ ಕಡಿವಾಣ ಹಾಕುವ ದಿಲ್ಲಿ ಪೊಲೀಸರ ಪ್ರಯತ್ನಗಳ ನಡುವೆಯೇ ನೊಯ್ಡ ಮತ್ತು ಗುರುಗ್ರಾಮದಲ್ಲಿನ ಕೆಲವು ಸಮಾಜವಿರೋಧಿ ಶಕ್ತಿಗಳು ಕೋವಿಡ್-19 ಚಿಕಿತ್ಸೆಯಲ್ಲಿ ಬಳಸಲಾಗುವ ಔಷಧಿಗಳನ್ನು ಹೆಚ್ಚಿನ ಬೆಲೆಗಳಲ್ಲಿ ಮಾರಾಟ ಮಾಡಿ ದುಡ್ಡು ಗೋರುತ್ತಿದ್ದಾರೆ. ಉದಾಹರಣೆಗೆ ಗುರುಗ್ರಾಮದಲ್ಲಿ ಕಾಳಸಂತೆಯಲ್ಲಿ ಕಳೆದ ವಾರ ರೆಮ್ಡಿಸಿವಿರ್ನ ಒಂದು ವಯಲ್ಗೆ 2,500 ರೂ.ನಂತೆ ಮತ್ತು ತೀವ್ರ ಸ್ಥಿತಿಯಲ್ಲಿರುವ ರೋಗಿಗಳ ಚಿಕಿತ್ಸೆಯಲ್ಲಿ ಬಳಕೆಯಾಗುವ ಟೋಸಿಲಿಜುಮಾಬ್ ಚುಚ್ಚುಮದ್ದನ್ನು ಏಳರಿಂದ ಹತ್ತು ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ. ನೆರೆಯ ನೋಯ್ಡದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಆಮ್ಲಜನಕ ಅಳವಡಿತ ಹಾಸಿಗೆಗಳು ಮತ್ತು ಐಸಿಯುಗಳಲ್ಲಿ ಪ್ರವೇಶಕ್ಕಾಗಿ ವ್ಯವಸ್ಥೆ ಮಾಡಲು ಲಕ್ಷಾಂತರ ರೂ.ಗಳನ್ನು ವಸೂಲು ಮಾಡಲಾಗುತ್ತಿದೆ.







